ನವದೆಹಲಿ: ಜಾಗತಿಕ ಇ-ಕಾಮರ್ಸ್ ದೈತ್ಯ ಅಮೆಝಾನ್ (Amazon) ಕಂಪನಿಯು ತನ್ನ ವೆಚ್ಚ ಕಡಿತದ ಭಾಗವಾಗಿ ಮತ್ತೊಂದು ಸುತ್ತಿನ ಉದ್ಯೋಗ ಕಡಿತವನ್ನು (Layoff) ನಡೆಸಿದೆ. ಈ ಬಾರಿ ಸುಮಾರು 1,000ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಲಾಗಿದ್ದು, ಅಮೆರಿಕ, ಭಾರತ ಹಾಗೂ ಬ್ರಿಟನ್ ಸೇರಿದಂತೆ ಹಲವು ಪ್ರಮುಖ ದೇಶಗಳಲ್ಲಿನ ರಿಟೇಲ್ (Retail) ವಿಭಾಗದ ಸಿಬ್ಬಂದಿಯ ಮೇಲೆ ಇದು ನೇರ ಪರಿಣಾಮ ಬೀರಿದೆ.
ವರದಿಗಳ ಪ್ರಕಾರ, ಅಮೆಝಾನ್ನ ಇ-ಕಾಮರ್ಸ್ ವೆಬ್ಸೈಟ್ ಹಾಗೂ ಮಾರಾಟ ವ್ಯವಸ್ಥೆಯ ಸಂಪೂರ್ಣ ನಿರ್ವಹಣೆ ನೋಡಿಕೊಳ್ಳುವ 'ಸ್ಟೋರ್ಸ್' (Stores) ವಿಭಾಗದಲ್ಲೇ ಹೆಚ್ಚಿನ ಉದ್ಯೋಗಿಗಳನ್ನು ತೆಗೆದುಹಾಕಲಾಗಿದೆ. ಈ ಕಡಿತವು ಕಂಪನಿಯು ಕೈಗೊಂಡಿರುವ ಜಾಗತಿಕ ಪುನಾರಚನೆ ಪ್ರಕ್ರಿಯೆಯ ಭಾಗವಾಗಿದ್ದು, ಮುಂದಿನ ದಿನಗಳಲ್ಲಿ ಜಾಗತಿಕವಾಗಿ ಸುಮಾರು 30,000 ಉದ್ಯೋಗಿಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಎನ್ನಲಾಗಿದೆ.
ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿರುವ ಕುರಿತು ಅಮೆಝಾನ್ ಆಡಳಿತ ಮಂಡಳಿಯು ಇಮೇಲ್ (Email) ಮೂಲಕ ಅಧಿಕೃತ ಮಾಹಿತಿ ನೀಡಿದೆ. ಈ ಹಿಂದೆ ಪ್ರಮುಖ ಟೆಕ್ ದೈತ್ಯ ಸಂಸ್ಥೆಗಳಾದ ಒರಾಕಲ್ (Oracle) ಮತ್ತು ಮೆಟಾ (Meta) ಕೂಡ ತಮ್ಮ ಸಿಬ್ಬಂದಿಗೆ ಇಮೇಲ್ ಕಳುಹಿಸುವ ಮೂಲಕವೇ ಉದ್ಯೋಗ ವಜಾದ ಸುದ್ದಿ ತಲುಪಿಸಿದ್ದವು. ಇದೇ ಹಾದಿಯನ್ನು ಈಗ ಅಮೆಝಾನ್ ಕೂಡ ಅನುಸರಿಸಿದೆ.
ಕಂಪನಿಯ ಈ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ಅಮೆಝಾನ್ ವಕ್ತಾರರು, "ಸಂಸ್ಥೆಯ ಭವಿಷ್ಯದ ಆದ್ಯತೆಗಳನ್ನು ಈಡೇರಿಸಲು ಹಾಗೂ ಸ್ಟೋರ್ಸ್ ವ್ಯವಹಾರವನ್ನು ಹೆಚ್ಚು ಪರಿಣಾಮಕಾರಿಯಾಗಿ ರೂಪಿಸಲು ಕೆಲವು ಭಾಗಗಳಲ್ಲಿ ಈ ಬದಲಾವಣೆಗಳನ್ನು ಮಾಡಲಾಗಿದೆ" ಎಂದು ತಿಳಿಸಿದ್ದಾರೆ. ಆದರೆ, ಈ ಸುತ್ತಿನಲ್ಲಿ ಒಟ್ಟು ಎಷ್ಟು ಉದ್ಯೋಗಿಗಳಿಗೆ ತೊಂದರೆಯಾಗಿದೆ ಎಂಬ ನಿಖರ ಸಂಖ್ಯೆಯನ್ನು ಕಂಪನಿ ಅಧಿಕೃತವಾಗಿ ಬಹಿರಂಗಪಡಿಸಿಲ್ಲ.