ಏ. 3 ರಂದು ಅಂಬಲಗೆರೆ ಶ್ರೀರಂಗನಾಥಸ್ವಾಮಿ ಬ್ರಹ್ಮರಥೋತ್ಸವ
ಚಿತ್ರದುರ್ಗ: ಹಿರಿಯೂರು ತಾಲ್ಲೂಕಿನ ಧಾರ್ಮಿಕ ಪುಣ್ಯಕ್ಷೇತ್ರವಾದ ಅಂಬಲಗೆರೆ ಗ್ರಾಮದಲ್ಲಿ ನೆಲೆಸಿರುವ ಶ್ರೀ ರಂಗನಾಥಸ್ವಾಮಿ ಜಾತ್ರಾ ಮಹೋತ್ಸವವು ಏಪ್ರಿಲ್ 1 ರಿಂದ ಏಪ್ರಿಲ್ 4 ರವರೆಗೆ ಅತ್ಯಂತ ವಿಜೃಂಭಣೆಯಿAದ ಜರುಗಲಿದೆ. ಪೂಜಾ ಕಾರ್ಯಕ್ರಮಗಳ ಪ್ರಮುಖ ಘಟ್ಟವಾದ 'ಬ್ರಹ್ಮ ರಥೋತ್ಸವ'ವು ಏಪ್ರಿಲ್ 3 ರಂದು ನಡೆಯಲಿದೆ ಎಂದು ದೇವಸ್ಥಾನದ ಸಮಿತಿ ತಿಳಿಸಿದೆ.
ಶ್ರೀ ವಿಜಯಾಭ್ಯುದಯ ಶಾಲಿವಾಹನ ಶಕ 1948ನೇ ಶ್ರೀ ಪರಾಭವ ನಾಮ ಸಂವತ್ಸರದ ಚೈತ್ರ ಶುದ್ಧ ಚತುರ್ದಶಿಯ ಪ್ರಯುಕ್ತ ಈ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಏಪ್ರಿಲ್ 1 ರ ಬುಧವಾರ ರಾತ್ರಿ 8 ಗಂಟೆಗೆ ಗರುಡೋತ್ಸವದೊಂದಿಗೆ ಚಾಲನೆ ದೊರೆಯಲಿದೆ. ಏಪ್ರಿಲ್ 2 ರಂದು ರಾತ್ರಿ 10 ಗಂಟೆಗೆ ಪುಣ್ಯಾಹ, ಪಂಚಾಮೃತ ಅಭಿಷೇಕ, ತುಳಸಿ ಅರ್ಚನೆ ಹಾಗೂ ಕುಂಕುಮಾರ್ಚನೆ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳು ಜರುಗಲಿವೆ. ಗ್ರಾಮಸ್ಥರು ಹಾಗೂ ಭಕ್ತಾದಿಗಳಿಂದ ಅರತಿ ರಥೋತ್ಸವ ನೆರವೇರಲಿದೆ.
ಏಪ್ರಿಲ್ 3 ರ ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ವೈಭವದ ಬ್ರಹ್ಮ ರಥೋತ್ಸವ ಜರುಗಲಿದ್ದು, ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಅಂದು ಸಹಸ್ರನಾಮ ಪೂಜೆ ಹಾಗೂ ರಾತ್ರಿ ಪಂಜಿನ ಸೇವೆ ನಡೆಯಲಿದೆ. ಏಪ್ರಿಲ್ 4 ರ ಶನಿವಾರದಂದು ಓಕುಳಿ ಬಂಡಿ ಕಾರ್ಯಕ್ರಮ, ಮಹಾ ಮಂಗಳಾರತಿ ಹಾಗೂ ಪ್ರಸಾದ ವಿನಿಯೋಗದೊಂದಿಗೆ ಜಾತ್ರಾ ಮಹೋತ್ಸವವು ಮುಕ್ತಾಯಗೊಳ್ಳಲಿದೆ.
ಈ ಧಾರ್ಮಿಕ ಕೈಂಕರ್ಯಗಳಲ್ಲಿ ಅರ್ಚಕರಾದ ಶ್ರೀ ಎಸ್. ತಿಮ್ಮರಾಯಪ್ಪ ಮತ್ತು ಸಿಬ್ಬಂದಿ ವರ್ಗ, ಗ್ರಾಮದ ಆಡಳಿತಾಧಿಕಾರಿ ಹರ್ಷ ಜಿ., ಕಂದಾಯ ನಿರೀಕ್ಷಕ ಎನ್. ವರದರಾಜು, ಉಪ ತಹಶೀಲ್ದಾರ್ ನವೀನ್ ಕುಮಾರ್ ಡಿ. ಹಾಗೂ ಮುಜರಾಯಿ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಅಂಬಲಗೆರೆ ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕೆಂದು ಕೋರಲಾಗಿದೆ.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.