ಅರುಣಾಚಲ ಪ್ರದೇಶದಲ್ಲಿ ಪ್ರಸ್ತಾವಿತ 11,200 ಮೆಗಾವಾಟ್ ಸಾಮರ್ಥ್ಯದ ಸಿಯಾಂಗ್ ಅಪ್ಪರ್ ಬಹುಪಯೋಗಿ ಯೋಜನೆಗೆ ಸಂಬಂಧಿಸಿದಂತೆ ಸಿಯಾಂಗ್, ಅಪ್ಪರ್ ಸಿಯಾಂಗ್ ಮತ್ತು ಈಸ್ಟ್ ಸಿಯಾಂಗ್ ಜಿಲ್ಲೆಗಳಲ್ಲಿ ನಡೆದ ಪ್ರತಿಭಟನೆಗಳು ಹಿಂಸಾಚಾರಕ್ಕೆ ತಿರುಗಿದ ಬೆನ್ನಲ್ಲೇ, ಕೇಂದ್ರ ಸರ್ಕಾರವು ಬಿಕ್ಕಟ್ಟು ಶಮನಗೊಳಿಸಲು ಸಿಆರ್ಪಿಎಫ್ನ (CRPF) ಎರಡು ರ್ಯಾಪಿಡ್ ಆಕ್ಷನ್ ಫೋರ್ಸ್ (RAF) ತುಕಡಿಗಳನ್ನು ನಿಯೋಜಿಸಿದೆ. ನವಿ ಮುಂಬೈನಿಂದ ಭಾರತೀಯ ವಾಯುಪಡೆಯ ಸಾರಿಗೆ ವಿಮಾನದ ಮೂಲಕ ಸುಮಾರು 250 ರ್ಯಾಪಿಡ್ ಆಕ್ಷನ್ ಫೋರ್ಸ್ ಸಿಬ್ಬಂದಿಯನ್ನು ಭಾನುವಾರದೊಳಗೆ ಪಾಸಿಘಾಟ್ಗೆ ತಲುಪಿಸಿ ನಿಯೋಜಿಸಲು ಕೇಂದ್ರ ಗೃಹ ಸಚಿವಾಲಯ ಶನಿವಾರ ನಿರ್ದೇಶನ ನೀಡಿದೆ. ಪ್ರಸ್ತುತ 2 ರಿಂದ 3 ಸಿಆರ್ಪಿಎಫ್ ಬಟಾಲಿಯನ್ಗಳು ರಾಜ್ಯದಲ್ಲಿದ್ದು, ಹೆಚ್ಚುವರಿ ಭದ್ರತೆಗಾಗಿ ಗಲಭೆ ನಿಗ್ರಹ ಪಡೆಗಳನ್ನು ರವಾನಿಸಲಾಗಿದೆ.
ಈಸ್ಟ್ ಸಿಯಾಂಗ್ ಜಿಲ್ಲೆಯ ಪಾಸಿಘಾಟ್ನಲ್ಲಿ 12 ಗಂಟೆಗಳ ಬಂದ್ ನಂತರ ಶುಕ್ರವಾರ ತಡರಾತ್ರಿ ಹಿಂಸಾಚಾರ ಭುಗಿಲೆದ್ದಿದ್ದು, ಶನಿವಾರ ಬೆಳಗಿನ ಜಾವ 3:30 ರವರೆಗೆ ಮುಂದುವರಿದಿತ್ತು. ಹಿಂಸಾಚಾರ ನಿರತ ಉಗ್ರ ಗುಂಪು ರಾಷ್ಟ್ರೀಯ ಜಲವಿದ್ಯುತ್ ನಿಗಮದ (NHPC) ಕಚೇರಿ ಮತ್ತು ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ್ದಲ್ಲದೆ, ರಾಜ್ಯ ಬಿಜೆಪಿ ಅಧ್ಯಕ್ಷರು ಸೇರಿದಂತೆ ಮೂವರು ರಾಜಕೀಯ ನಾಯಕರ ನಿವಾಸಗಳನ್ನು ಧ್ವಂಸಗೊಳಿಸಿದೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಯತ್ನಿಸಿದ ಸ್ಥಳೀಯ ಪೊಲೀಸರು ಹಾಗೂ ಕೇಂದ್ರ ಭದ್ರತಾ ಪಡೆಯ ಸಿಬ್ಬಂದಿ ಕಲ್ಲು ತೂರಾಟದಲ್ಲಿ ಗಾಯಗೊಂಡಿದ್ದಾರೆ.
ಈ ಹಿಂಸಾತ್ಮಕ ಘಟನೆಗಳಿಗೆ ತೀವ್ರ ವಿಷಾದ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಪೆಮಾ ಖಂಡು, ಪ್ರಜಾಪ್ರಭುತ್ವದಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಲು ಪ್ರತಿಯೊಬ್ಬರಿಗೂ ಹಕ್ಕಿದೆ, ಆದರೆ ಅದು ಕಾನೂನಿನ ಚೌಕಟ್ಟಿನಲ್ಲಿದ್ದು ಸಾರ್ವಜನಿಕ ಆಸ್ತಿಗೆ ಹಾನಿ ಉಂಟುಮಾಡಬಾರದು ಎಂದು ಮನವಿ ಮಾಡಿದ್ದಾರೆ. ಸಮಾಜದ ಎಲ್ಲಾ ವರ್ಗದ ಜನರು ಶಾಂತಿ ಮತ್ತು ಸೌಹಾರ್ದತೆಯನ್ನು ಕಾಯ್ದುಕೊಳ್ಳಬೇಕೆಂದು ಕೋರಿರುವ ಅವರು, ಯಾವುದೇ ರೀತಿಯ ಕಾನೂನುಬಾಹಿರ ಕೃತ್ಯಗಳನ್ನು ಸರ್ಕಾರ ಸಹಿಸುವುದಿಲ್ಲ ಎಂದು ಎಚ್ಚರಿಸಿದ್ದಾರೆ.