ಜಪಾನ್: ಭಾರತದ ತಾರಾ ಪ್ಯಾರಾ-ಅಥ್ಲೀಟ್, ಎರಡು ಬಾರಿಯ ಪ್ಯಾರಾಲಿಂಪಿಕ್ ಪದಕ ವಿಜೇತ ನಿಶಾದ್ ಕುಮಾರ್ ಅವರು 2026ರ ಏಷ್ಯನ್ ಪ್ಯಾರಾ ಗೇಮ್ಸ್‌ನ ಎರಡನೇ ದಿನದಂದು ಅಪ್ರತಿಮ ಪ್ರದರ್ಶನ ನೀಡಿ ಪುರುಷರ ಹೈಜಂಪ್ ಟಿ47 (T47) ವಿಭಾಗದಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ. ಈ ಮೂಲಕ ಅವರು ಕೂಟದಲ್ಲಿ ತಮ್ಮ ಸತತ ಎರಡನೇ ಚಿನ್ನದ ಪದಕವನ್ನು ಬಾಚಿಕೊಂಡಿದ್ದಾರೆ.
ಮಿಜುಹೋ ಅಥ್ಲೆಟಿಕ್ ಸ್ಟೇಡಿಯಂನಲ್ಲಿ ನಡೆದ ಸ್ಪರ್ಧೆಯಲ್ಲಿ ಸಂಪೂರ್ಣ ಪ್ರಾಬಲ್ಯ ಮೆರೆದ ನಿಶಾದ್, ಬರೋಬ್ಬರಿ 2.04 ಮೀಟರ್ ಎತ್ತರ ಜಿಗಿಯುವ ಮೂಲಕ ಕೂಟದ ನೂತನ ದಾಖಲೆಯೊಂದಿಗೆ (Games Record) ಚಿನ್ನದ ಪದಕಕ್ಕೆ ಮುತ್ತಿಕ್ಕಿದರು. ಇದಕ್ಕೂ ಮುನ್ನ ಸ್ಪರ್ಧೆಯ ಮೊದಲ ದಿನದಂದು ನಡೆದ ಪುರುಷರ ಲಾಂಗ್ ಜಂಪ್ ಟಿ47 ಸ್ಪರ್ಧೆಯಲ್ಲೂ ಅವರು ಚಿನ್ನ ಗೆದ್ದಿದ್ದರು.
ದಾಖಲೆಯ ಜಿಗಿತ:
ಸ್ಪರ್ಧೆಯುದ್ದಕ್ಕೂ ಅತ್ಯುತ್ತಮ ಲಯದಲ್ಲಿದ್ದ ಹಿಮಾಚಲ ಪ್ರದೇಶದ ನಿಶಾದ್ ಕುಮಾರ್, ತಮ್ಮ ಆರಂಭಿಕ ಯತ್ನಗಳಲ್ಲೇ 1.88 ಮೀ, 1.94 ಮೀ ಮತ್ತು 1.98 ಮೀ ಎತ್ತರವನ್ನು ಸುಲಭವಾಗಿ ದಾಟಿದರು. ನಂತರ 2.02 ಮೀಟರ್ ಎತ್ತರವನ್ನು ದಾಟಿ ಆರಂಭದಲ್ಲೇ ಅಗ್ರಸ್ಥಾನವನ್ನು ಭದ್ರಪಡಿಸಿಕೊಂಡರು. ಚಿನ್ನದ ಪದಕ ಖಚಿತವಾದ ಬಳಿಕ, ಬಾರ್ ಅನ್ನು 2.04 ಮೀಟರ್‌ಗೆ ಏರಿಸಿ ಮೊದಲ ಯತ್ನದಲ್ಲೇ ಯಶಸ್ವಿಯಾಗಿ ಜಿಗಿದು ನೂತನ ಏಷ್ಯನ್ ಪ್ಯಾರಾ ಗೇಮ್ಸ್ ದಾಖಲೆ ಬರೆದರು. ಬಳಿಕ 2.06 ಮೀಟರ್ ಎತ್ತರಕ್ಕೆ ಪ್ರಯತ್ನಿಸಿದರಾದರೂ ಅದನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ.
ಇತರೆ ಪದಕ ವಿಜೇತರು:
ಉಜ್ಬೇಕಿಸ್ತಾನ್‌ನ ಮುಹಮ್ಮದ್‌ಅಬ್ದುಲ್ಲಾ ತುರ್ಸುಂಜೊನೊವ್ 1.94 ಮೀಟರ್ ಜಿಗಿದು ತಮ್ಮ ವೈಯಕ್ತಿಕ ಶ್ರೇಷ್ಠ ಸಾಧನೆಯೊಂದಿಗೆ ಬೆಳ್ಳಿ ಪದಕ ಪಡೆದರು. ಥಾಯ್ಲೆಂಡ್‌ನ ಅಂಗ್ಕರ್ನ್ ಚಾನಾಬೂನ್ 1.75 ಮೀಟರ್ ಎತ್ತರ ದಾಟಿ ಕಂಚಿನ ಪದಕಕ್ಕೆ ತೃಪ್ತಿಪಟ್ಟರು.
ಐತಿಹಾಸಿಕ ಡಬಲ್ ಸಾಧನೆ:
ಕೇವಲ 24 ಗಂಟೆಗಳ ಅಂತರದಲ್ಲಿ ನಿಶಾದ್ ಎರಡು ಚಿನ್ನದ ಪದಕಗಳನ್ನು ಗೆದ್ದು ಇತಿಹಾಸ ಸೃಷ್ಟಿಸಿದ್ದಾರೆ. ಸೋಮವಾರ ನಡೆದ ಪುರುಷರ ಲಾಂಗ್ ಜಂಪ್‌ನಲ್ಲಿ ಅವರು 7.11 ಮೀಟರ್ ಜಿಗಿಯುವ ಮೂಲಕ ವೈಯಕ್ತಿಕ ಶ್ರೇಷ್ಠ ಪ್ರದರ್ಶನದೊಂದಿಗೆ ಸ್ವರ್ಣ ಗೆದ್ದಿದ್ದರು.
ಟೋಕಿಯೊ 2020 ಮತ್ತು ಪ್ಯಾರಿಸ್ 2024ರ ಪ್ಯಾರಾಲಿಂಪಿಕ್ಸ್‌ನ ಹೈಜಂಪ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ನಿಶಾದ್, ಈಗ ಐಚಿ-ನಗೋಯಾದಲ್ಲಿ ಡಬಲ್ ಚಿನ್ನ ಗೆಲ್ಲುವ ಮೂಲಕ ವಿಶ್ವದ ಅತ್ಯಂತ ಪ್ರಭಾವಿ ಪ್ಯಾರಾ-ಅಥ್ಲೀಟ್‌ಗಳಲ್ಲಿ ಒಬ್ಬರಾಗಿ ಹೊರಹೊಮ್ಮಿದ್ದಾರೆ. ಇವರ ಈ ಅದ್ಭುತ ಸಾಧನೆಯ ಜತೆಗೆ, ಪುರುಷರ ಡಿಸ್ಕಸ್ ಥ್ರೋ ಫೈನಲ್‌ನಲ್ಲಿ ಭಾರತದ ಕ್ರೀಡಾಪಟುಗಳು ಕ್ಲೀನ್ ಸ್ವೀಪ್ (ಚಿನ್ನ, ಬೆಳ್ಳಿ ಮತ್ತು ಕಂಚು) ಸಾಧಿಸುವ ಮೂಲಕ ಭಾರತದ ಹಿರಿಮೆಯನ್ನು ಹೆಚ್ಚಿಸಿದ್ದಾರೆ.