ಬಲೂಚಿಸ್ತಾನದ ಗ್ವಾದರ್ ಜಿಲ್ಲೆಯ ಜಿವಾನಿ ಕರಾವಳಿ ಪ್ರದೇಶದಲ್ಲಿ ಪಾಕಿಸ್ತಾನ ಕರಾವಳಿ ಕಾವಲು ಪಡೆಯ ಎರಡು ದೋಣಿಗಳ ಮೇಲೆ ಬಲೂಚಿಸ್ತಾನ್ ಲಿಬರೇಶನ್ ಆರ್ಮಿ (BLA) ಸಂಘಟನೆಯು ನಡೆಸಿದ ದಾಳಿಯಲ್ಲಿ 13 ಪಾಕಿಸ್ತಾನಿ ಸಿಬ್ಬಂದಿ ಹತ್ಯೆಗೀಡಾಗಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿ.
ಬಿಎಲ್ಎ ಸಂಘಟನೆಯ ಸಮುದ್ರ ವಿಭಾಗವಾದ ಹಮ್ಮಾಲ್ ಮೇರಿಟೈಮ್ ಡಿಫೆನ್ಸ್ ಫೋರ್ಸ್ (HMDF) ಈ ಸಂಘಟಿತ ದಾಳಿಯನ್ನು ನಡೆಸಿದ್ದು, ಕರಾವಳಿ ಕಾವಲು ಪಡೆಯ ಎರಡು ದೊಡ್ಡ ದೋಣಿಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿ 13 ಸಿಬ್ಬಂದಿಯನ್ನು ಹತ್ಯೆ ಮಾಡಲಾಗಿದೆ ಎಂದು ಗುಂಪಿನ ವಕ್ತಾರ ಜಿಯಂದ್ ಬಲೂಚ್ ತಿಳಿಸಿದ್ದಾರೆ. ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿರುವ ದೋಣಿಯನ್ನು ಬಳಸಿ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ಸಂಘಟನೆಯು ಬಿಡುಗಡೆ ಮಾಡಿರುವ ವೀಡಿಯೊದಲ್ಲಿ ತೋರಿಸಲಾಗಿದೆ. ಬಲೂಚಿಸ್ತಾನದ ಕಡಲ ಪ್ರದೇಶ, ಕರಾವಳಿ ಮತ್ತು ಸಂಪನ್ಮೂಲಗಳನ್ನು ರಕ್ಷಿಸಲು ಹಾಗೂ ಪಾಕಿಸ್ತಾನಿ ಪಡೆಗಳ ಕಡಲ ಚಟುವಟಿಕೆಗಳನ್ನು ತಡೆಯಲು ಎಚ್ಎಂಡಿಎಫ್ ಅನ್ನು ಈ ವರ್ಷದ ಏಪ್ರಿಲ್ನಲ್ಲಿ ರಚಿಸಲಾಗಿದೆ ಎಂದು ಬಿಎಲ್ಎ ಸ್ಪಷ್ಟಪಡಿಸಿದೆ.
ಕೇವಲ ಪರ್ವತಗಳು ಮತ್ತು ನಗರಗಳಿಗೆ ಮಾತ್ರ ತಮ್ಮ ಹೋರಾಟ ಸೀಮಿತವಾಗಿಲ್ಲವೆಂದಿರುವ ಬಿಎಲ್ಎ, ಮುಂಬರುವ ದಿನಗಳಲ್ಲಿ ಪಾಕಿಸ್ತಾನಿ ಪಡೆಗಳ ನೌಕಾ ಸ್ಥಾಪನೆಗಳು ಹಾಗೂ ಆಸ್ತಿಗಳನ್ನು ಆಳ ಸಮುದ್ರದಲ್ಲೂ ಗುರಿಯಾಗಿಸುವ ಸಂಪೂರ್ಣ ಸಾಮರ್ಥ್ಯವನ್ನು ತಲುಪಿದ್ದೇವೆ ಎಂದು ಎಚ್ಚರಿಸಿದೆ. ಶತ್ರುಗಳ ಸಂಪೂರ್ಣ ಹಿಂತೆಗೆತ ಮತ್ತು ಸ್ವತಂತ್ರ ಬಲೂದ್ ರಾಷ್ಟ್ರದ ಮರುಸ್ಥಾಪನೆವರೆಗೆ ತಮ್ಮ ಸಶಸ್ತ್ರ ಹೋರಾಟವು ಪೂರ್ಣ ತೀವ್ರತೆಯೊಂದಿಗೆ ಮುಂದುವರಿಯಲಿದೆ ಎಂದು ಸಂಘಟನೆಯು ಎಚ್ಚರಿಕೆ ನೀಡಿದೆ.