Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಇಂದು ಬಲಿಪಾಡ್ಯ : ಆನಂದದ ಅರಿವು

ನಿಸರ್ಗದ ವಿದ್ಯಮಾನಗಳಲ್ಲಿ ಕತ್ತಲೆ–ಬೆಳಕಿನ ‘ಆಟ’ ಸ್ವಾರಸ್ಯಕರ. ಕತ್ತಲೆಯು ಕಳೆದು ಬೆಳಕು ಮೂಡುವುದು; ಬೆಳಕು ಮರೆಯಾಗಿ ಕತ್ತಲು ಕವಿಯುವುದು – ಇದು ನಿರಂತರ ಚಕ್ರ. ಕತ್ತಲೆಯಿದ್ದಾಗ ಭಯ, ಅಪಾಯ; ಅದೇ ಬೆಳಕಿನಲ್ಲಿ ಧೈರ್ಯ, ಭರವಸೆ. ಹೀಗಾಗಿ ಮನುಷ್ಯನ ಜೀವನದಲ್ಲಿ ಬೆಳಕು ಎನ್ನುವುದು ಧೈರ್ಯಕ್ಕೂ ಪ್ರಗತಿಗೂ ಒಳತಿಗೂ ಸಂಕೇತ ಎನಿಸಿಕೊಂಡಿತು; ವಿಶಾಲಾರ್ಥದಲ್ಲಿ ‘ಬೆಳಕು’ ಎಂಬುದು ಜ್ಞಾನಕ್ಕೆ ಸಂಕೇತವೇ ಆಯಿತು. ಜ್ಞಾನವನ್ನು ಬಯಸುವುದೂ, ಬೆಳಕನ್ನು ಅರಸುವುದು ‘ಸಂಸ್ಕೃತಿ‘ ಎಂದು ಹೆಸರಾಯಿತು.

ಕತ್ತಲೆ–ಬೆಳಕಿನ ಸುತ್ತಾಟದಲ್ಲಿ ಒಳಿತು–ಕೆಡಕುಗಳ ಚಕ್ರವನ್ನೂ ಕಾಣಬಹುದು. ರಾಕ್ಷಸತ್ವದ ಸೋಲು ಮತ್ತು ದೈವತ್ವಗಳ ಗೆಲುವಿನಲ್ಲಿ ಈ ತತ್ತ್ವ ಅಡಕವಾಗಿದೆ. ರಾಕ್ಷಸರು ಹೊರಗಿನವೇ ಆಗಬೇಕಿಲ್ಲ; ನಮ್ಮೊಳಗೂ ರಾಕ್ಷಸರಿದ್ದಾರೆ. ಆಲಸ್ಯ, ಸ್ವಾರ್ಥ, ಅಹಂಕಾರ, ಕ್ರೌರ್ಯ, ಕೇಡಿನ ಬುದ್ಧಿ, ಕಾಮ, ಕ್ರೋಧ, ಮದ, ಮಾತ್ಸರ್ಯ – ಇಂಥವೆಲ್ಲವೂ ರಾಕ್ಷಸತ್ವದ ಪ್ರತಿನಿಧಿಗಳೇ. ಈ ದುರ್ಗುಣಗಳಿಗೆ ನಮ್ಮ ಮೈಯನ್ನು ಒಪ್ಪಿಸಿದರೆ ಆಗ ನಾವು ರಾಕ್ಷಸರೇ ಆಗುತ್ತೇವೆಯಷ್ಟೆ!

ಬಲಿಪಾಡ್ಯಮಿ ಆಚರಣೆಯ ಭಿತ್ತಿಯಲ್ಲಿ ಈ ಸಂದೇಶವೂ ಇದೆ. ಬಲಿ ಚಕ್ರವರ್ತಿಯು ದಾನಶೀಲ; ಯಾರು ಏನು ಕೇಳಿದರೂ ಕೊಡುವಂಥವನು. ಆದರೆ ಅವನ ಈ ದಾನಬುದ್ಧಿಯೇ ಅವನ ಪಾಲಿಗೆ ದಾನವಬುದ್ಧಿಯಾಯಿತು. ನಾನೊಬ್ಬ ಅಸಾಮಾನ್ಯ ದಾನಶೀಲ – ಎಂಬ ಅಹಂಕಾರದ ಪರ್ವತ ಅವನ ತಲೆಯನ್ನು ಆಕ್ರಮಿಸಿತು. ‘ಇಡಿಯ ಸೃಷ್ಟಿ ಭಗವಂತನ ಆಸ್ತಿ; ಚರಾಚರ ವಸ್ತುಗಳೆಲ್ಲವೂ ಅವನ ಅಧೀನ. ಇದನ್ನು ಅರ್ಥಮಾಡಿಕೊಂಡು, ಲೋಭವನ್ನು ತ್ಯಜಿಸಿ, ನಿನಗೆ ಎಷ್ಟು ಬೇಕು ಅಷ್ಟನ್ನೇ ಬಳಸಿಕೋ. ಇವೆಲ್ಲವೂ ಭಗವಂತನಿಗೆ ಸೇರಿದ ಸ್ವತ್ತು ಎಂಬ ಸತ್ಯವನ್ನು ಮರೆಯಬೇಡ’ ಎಂಬ ಆರ್ಷಪ್ರಜ್ಞೆ ಅವನಿಂದ ದೂರವಾಯಿತು. ಎಲ್ಲೆಲ್ಲೂ ವ್ಯಾಪಿಸಿರುವ ಆ ಈಶ್ವರತತ್ತ್ವವನ್ನು ಮತ್ತೆ ನೆನಪಿಸಲು ವಿಷ್ಣುವೇ ಬಲಿಯಲ್ಲಿಗೆ ಬರಬೇಕಾಯಿತು. ಬಲಿಯ ಸಣ್ಣತನವನ್ನು ದೂರಮಾಡಬೇಕಾಗಿದ್ದುದರಿಂದ ವಿಷ್ಣುವೂ ಅವನಲ್ಲಿಗೆ ವಾಮನನಾಗಿಯೇ ಬರಬೇಕಾಯಿತು! ಸಣ್ಣತನದ ಬುದ್ಧಿಯಲ್ಲಿಯೇ ಮುಳುಗಿದ್ದ ಬಲಿ ಚಕ್ರವರ್ತಿಗೆ ವಾಮನನ ವ್ಯಾಪ್ತಿ ಅರಿವಿಗೆ ಬರುವುದಾದರೂ ಹೇಗೆ? ಆದುದರಿಂದಲೇ ಅವನು ವಾಮನ ಕೇಳಿದ ಮೂರು ಹೆಜ್ಜೆಗಳನ್ನು ಸ್ವಲ್ಪವೂ ವಿಚಾರಿಸಿದೆ ‘ದಾನ’ ಮಾಡಿದ. ಕುಬ್ಜನಾಗಿದ್ದ ವಾಮನ ಕೂಡಲೇ ಬೆಳೆಯತೊಡಗಿ, ಬೆಳೆದು ಬೆಳೆದು ಬೆಳೆಯುತ್ತಲೇಹೋದ! ವಿಷ್ಣುವಿನ ಈ ಬೆಳವಣಿಗೆಯ ಬೆಳಕಿನಲ್ಲಿ ಬಲಿಯು ತನ್ನ ಅಹಂಕಾರವನ್ನೇ ‘ಬಲಿ’ ಕೊಡಬೇಕಾಯಿತು. ಒಂದು ಹೆಜ್ಜೆಯಲ್ಲಿ ಇಡಿಯ ಭೂಮಿಯನ್ನೂ, ಎರಡನೆಯ ಹೆಜ್ಜೆಯಲ್ಲಿ ಆಗಸವನ್ನೂ ಅಳೆದ ವಿಷ್ಣುವು, ‘ಮೂರನೆಯ ಹೆಜ್ಜೆಗೆ ಅವಕಾಶ ಎಲ್ಲಿ’ ಎಂದು ಬಲಿಯನ್ನು ಕೇಳಿದ. ವಿಷ್ಣುವಿನ ಮೂರನೆಯ ಹೆಜ್ಜೆಗೆ ಸ್ಥಳವನ್ನು ಒದಗಿಸಬಲ್ಲ ತಾಣ ಇಡಿಯ ಸೃಷ್ಟಿಯಲ್ಲಿಯೇ ಎಲ್ಲಾದರೂ ಇದ್ದೀತೆ? ಆದರೆ ಅಂಥದೊಂದು ನೆಲೆಯೂ ಇದ್ದೀತು ಎಂದು ಬಲಿಯ ‘ತಲೆ’, ಎಂದರೆ ಅವನ ಅಹಂಕಾರ, ಆಲೋಚಿಸಿತು. ಈ ಅಹಂಕಾರ ತೊಲಗದೆ ವಿಷ್ಣುವಿನೊಂದಿಗೆ ಬಲಿಗೆ ತಾದಾತ್ಮ್ಯ ಒದಗುವಂತಿರಲಿಲ್ಲ. ಈ ಅರಿವು ಬಲಿಯಲ್ಲಿ ಮೂಡಿತು. ಆ ಕ್ಷಣವೇ ಅವನು ತ್ರಿವಿಕ್ರಮನ ಮೂರನೆಯ ಹೆಜ್ಜೆಗೆ ತಾಣವಾಗಿ ತನ್ನ ತಲೆಯನ್ನು ಒಪ್ಪಿಸಿದ. ವಿಷ್ಣುವು ಬಲಿಯ ತಲೆಯನ್ನು ಮೆಟ್ಟಿ, ಅವನ ಅಹಂಕಾರವನ್ನು ಇಲ್ಲವಾಗಿಸಿದ; ಆ ಮೂಲಕ ಬಲಿಗೆ ಸರ್ವವ್ಯಾಪಕವೂ ಸಾರ್ವಕಾಲಿಕವೂ ಆದ ‘ಸೋsಹಂ’ಭಾವದ ಚಿರಂಜೀವಿಪದವಿಯನ್ನು ಅನುಗ್ರಹಿಸಿದ.

ಪುರಾಣದ ರೂಪಕಗಳು ಐತಿಹಾಸಿಕ ಕಥನಗಳಲ್ಲ; ಅವು ನಿತ್ಯವಾಗಿರುವ ಜೀವನದರ್ಶನದ ಪ್ರತಿಮೆಗಳು; ಎಲ್ಲ ಕಾಲಕ್ಕೂ ಒದಗುವ ಅರಿವಿನ ಬೆಳಕು. ನಮ್ಮ ಮನೋಬುದ್ಧಿಗಳಲ್ಲಿ ಸುಪ್ತವಾಗಿರುವ ಅಹಂಕಾರದ ದಮನವಾಗಬೇಕು; ಆಗ ಮಾತ್ರವೇ ಎಲ್ಲೆಲ್ಲೂ ವ್ಯಾಪಿಸಿರುವ ಆನಂದದ ಅನುಭವ ದಕ್ಕೀತು – ಎಂಬುದೇ ಬಲಿಪಾಡ್ಯಮಿಯ ಕಾಣ್ಕೆ.

✒️ಎಸ್.ಸೂರ್ಯಪ್ರಕಾಶ ಪಂಡಿತ್

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಡಾ. ಪ್ರಭಾಕರ ಕೋರೆ ಅವರಿಗೆ ಪದ್ಮಶ್ರೀ ಪ್ರಶಸ್ತಿ: ಲಿಂಗಾಯತ ಸಮಾಜದ ವತಿಯಿಂದ ಭವ್ಯ ಸನ್ಮಾನಥ್ರೋ ಬಾಲ್ ಪಂದ್ಯಾವಳಿಯಲ್ಲಿ ಗೆಲುವು ಸಾಧಿಸಿದ ಬೆಳಗಾವಿ ಜಿಎ ಪ್ರೌಢಶಾಲೆಯ ಬಾಲೆಯರುಜಿಲ್ಲಾ ಮಟ್ಟದ ಶಿಕ್ಷಕ ಪ್ರಶಸ್ತಿ ಪ್ರಕಟ ಜಿಲ್ಲೆಯ ಉತ್ತಮ ಶಿಕ್ಷಕರಿಗೆ ರಾಜ್ಯ ಮಟ್ಟದ ಶಿಕ್ಷಕ ಪ್ರಶಸ್ತಿಬೈಕ್ ಕಳ್ಳನನ್ನು ಬಂಧಿಸಿದ ಪೊಲೀಸರುಭೀಕರ ರಸ್ತೆ ಅಪಘಾತ: ಇಬ್ಬರು ಯುವಕರ ದುರ್ಮರಣಪ್ರಜಾಪಿತ ಬ್ರಹ್ಮಾಕುಮಾರಿ ಶಹಾಪುರ ಕೇಂದ್ರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮಾಚರಣೆಸುರಂಗದಲ್ಲಿ 9 ದಿನ ಹರೇ ಕೃಷ್ಣ ಪಠಿಸುತ್ತಿದ್ದವ ಜನ್ಮಾಷ್ಟಮಿಯಂದು ಹೊರಬಂದಎರಡೇ ತಿಂಗಳಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಇಬ್ಬಾಗ: ಅಸ್ತಿತ್ವಕ್ಕೆ ಬಂತು ಹೊಸ ಬಣ!ಅಯೋಧ್ಯೆ ದೇಗುಲದ ಅಭಿವೃದ್ಧಿಗೆ ಭಕ್ತಾದಿಗಳ ಬೆಂಬಲ ಕೋರಿದ ರಾಮಮಂದಿರದ ನೂತನ ಸಿಇಒ