ಅಮೆರಿಕ: ಈಜುಕೊಳದಲ್ಲಿ ಮುಳುಗಿ ಅಸ್ವಸ್ಥಗೊಂಡಿದ್ದ 18 ತಿಂಗಳ ಹಸುಗೂಸನ್ನು ತುರ್ತು ಚಿಕಿತ್ಸಾ ವೈದ್ಯರು "ಮೃತಪಟ್ಟಿದ್ದಾನೆ" ಎಂದು ಘೋಷಿಸಿದ ಸುಮಾರು 5 ಗಂಟೆಗಳ ಬಳಿಕ, ಮಗು ಶವಾಗಾರದ 'ಕೋಲ್ಡ್ ರೂಮ್'ನಲ್ಲಿ ಜೀವಂತವಾಗಿ ಉಸಿರಾಡುತ್ತಿರುವುದು ಪತ್ತೆಯಾದ ಆಘಾತಕಾರಿ ಘಟನೆ ಅಮೆರಿಕದ ಅರಿಜೋನಾದಲ್ಲಿ ಬೆಳಕಿಗೆ ಬಂದಿದೆ. ಈ ಘಟನೆಯಿಂದ ಆಘಾತಕ್ಕೊಳಗಾದ ಪಾಲಕರು ಆಸ್ಪತ್ರೆ ಹಾಗೂ ವೈದ್ಯರ ವಿರುದ್ಧ ಕಾನೂನು ಸಮರಕ್ಕೆ ಮುಂದಾಗಿದ್ದಾರೆ.
ಈಜುಕೊಳದಲ್ಲಿ ಬಿದ್ದ ಮಗುವನ್ನು ಮೃತ ಎಂದಿದ್ದ ವೈದ್ಯರು
2026ರ ಫೆಬ್ರವರಿ 8 ರಂದು ಅರಿಜೋನಾದ ಗಿಲ್ಬರ್ಟ್‌ನಲ್ಲಿರುವ ಮನೆಯ ಈಜುಕೊಳದಲ್ಲಿ 18 ತಿಂಗಳ ವಿನ್ಸೆಂಟ್ ಲೊರೆಂಜೊ ಫಿಯೋರ್ಡಿಲಿನೊ ಎಂಬ ಕಂದಮ್ಮ ಮುಳುಗಿದ್ದು, ತಕ್ಷಣವೇ ಮಗುವನ್ನು ಸ್ಥಳೀಯ 'ಮರ್ಸಿ ಗಿಲ್ಬರ್ಟ್ ಮೆಡಿಕಲ್ ಸೆಂಟರ್'ಗೆ ದಾಖಲಿಸಲಾಗಿತ್ತು. ಆಸ್ಪತ್ರೆಗೆ ತಂದ ಸುಮಾರು 1 ಗಂಟೆಯ ನಂತರ ತುರ್ತು ಚಿಕಿತ್ಸಾ ವೈದ್ಯ ಡಾ. ಆರ್ಯನ್ ತೂಸಿ ಅವರು ಸಂಜೆ 6:20 ರ ಸುಮಾರಿಗೆ ಮಗು ಮೃತಪಟ್ಟಿರುವುದಾಗಿ ಅಧಿಕೃತವಾಗಿ ಘೋಷಿಸಿದ್ದರು.
ಮಗುವಿನ ತಾಯಿ ಅಲೆಕ್ಸಸ್ ಫಿಯೋರ್ಡಿಲಿನೊ, ಕಂದಮ್ಮನನ್ನು ಕೊನೆಯ ಬಾರಿಗೆ ಅಪ್ಪಿಕೊಂಡಾಗ ಉಸಿರಾಟದ ಚಲನೆ ಗಮನಿಸಿ ವೈದ್ಯರಿಗೆ ತಿಳಿಸಿದ್ದರು. ಆದರೆ, ಇವು ಮಗುವಿನ ಅಂತಿಮ ಕ್ಷಣಗಳ ಬಿಕ್ಕಳಿಕೆಗಳಷ್ಟೇ (Gasping), ಇನ್ನು ಮುಂದೆ ಚಿಕಿತ್ಸೆ ಮುಂದುವರಿಸಿದರೆ ಮಗುವಿಗೆ ಮತ್ತಷ್ಟು ಹಿಂಸೆಯಾಗುತ್ತದೆ ಎಂದು ವೈದ್ಯರು ನಂಬಿಸಿದ್ದರು. ಸ್ಥಳದಲ್ಲಿದ್ದ ಇಬ್ಬರು ಪೊಲೀಸ್ ಅಧಿಕಾರಿಗಳೂ ಮಗುವಿನಲ್ಲಿ ಜೀವಂತಿಕೆಯ ಲಕ್ಷಣಗಳನ್ನು ಶಂಕಿಸಿದ್ದರೂ, "ನಾನು ಮೆಡಿಕಲ್ ಶಾಲೆಗೆ ಸುಮ್ಮನೆ ಹೋಗಿಲ್ಲ, ನನ್ನ ಕೆಲಸವನ್ನು ನನಗೆ ಮಾಡಲು ಬಿಡಿ" ಎಂದು ವೈದ್ಯರು ಅವರ ಆಕ್ಷೇಪವನ್ನು ತಳ್ಳಿಹಾಕಿ ಮಗುವಿನ ದೇಹವನ್ನು ಶವಾಗಾರದ ಕೋಲ್ಡ್ ರೂಮ್‌ಗೆ ರವಾನಿಸಿದ್ದರು.
ಶವಾಗಾರದಲ್ಲಿ ಉಸಿರಾಡುತ್ತಿದ್ದ ಕಂದಮ್ಮ: ಬೆಚ್ಚಿಬಿದ್ದ ಸಿಬ್ಬಂದಿ
ಮಗು ಸಾವನ್ನಪ್ಪಿದ ಎಂದು ತಿಳಿದು ಪಾಲಕರು ಪೊಲೀಸ್ ಠಾಣೆಯಲ್ಲಿ ವಿಚಾರಣೆ ಎದುರಿಸುತ್ತಿದ್ದಾಗ ಪವಾಡವೊಂದು ನಡೆದಿತ್ತು. ರಾತ್ರಿ 11:52 ರ ಸುಮಾರಿಗೆ ಮೃತದೇಹವನ್ನು ತೆಗೆದುಕೊಂಡು ಹೋಗಲು ಶವಾಗಾರಕ್ಕೆ ಬಂದ ಮ್ಯಾರಿಕೋಪಾ ಕೌಂಟಿ ವೈದ್ಯಕೀಯ ಪರೀಕ್ಷಕರ ಕಚೇರಿಯ ಸಿಬ್ಬಂದಿಯೊಬ್ಬರು, ಮಗು ಉಸಿರಾಡುತ್ತಿರುವುದನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ತಕ್ಷಣವೇ ಮಗುವನ್ನು ಫೀನಿಕ್ಸ್ ಚಿಲ್ಡ್ರನ್ಸ್ ಆಸ್ಪತ್ರೆಗೆ ತುರ್ತಾಗಿ ದಾಖಲಿಸಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಯಿತು. ಸಾವನ್ನಪ್ಪಿದ್ದಾನೆ ಎಂದಿದ್ದ ಮಗು ಜೀವಂತವಾಗಿರುವ ಸುದ್ದಿ ಕೇಳಿ ಪಾಲಕರು ಆನಂದಭಾಷ್ಪ ಸುರಿಸಿದರು.
ಮೆದುಳಿಗೆ ತೀವ್ರ ಹಾನಿ: ಚೇತರಿಕೆಗೆ ಪರದಾಟ
ಶವಾಗಾರದಿಂದ ಪವಾಡಸದೃಶವಾಗಿ ಬದುಕುಳಿದು ಬಂದಿರುವ ಮಗುವಿಗೆ ಇದೀಗ ಗಂಭೀರ ಆರೋಗ್ಯ ಸಮಸ್ಯೆಗಳು ಎದುರಾಗಿವೆ. ದೀರ್ಘಕಾಲ ಆಮ್ಲಜನಕದ ಕೊರತೆಯಿಂದಾಗಿ ಮಗುವಿನ ಮೆದುಳಿಗೆ ತೀವ್ರ ಹಾನಿಯಾಗಿದೆ (Severe brain injury). ಮಗು ತಾನಾಗಿಯೇ ಆಹಾರ ನುಂಗಲು, ಕುಳಿತುಕೊಳ್ಳಲು ಅಥವಾ ತೆವಳಲು ಸಾಧ್ಯವಾಗುತ್ತಿಲ್ಲ ಎಂದು ಕುಟುಂಬದ ಪರ ವಕೀಲ ಜಾನ್ ಬ್ರೂವರ್ ತಿಳಿಸಿದ್ದಾರೆ. ವೆಂಟಿಲೇಟರ್ ನೆರವಿನೊಂದಿಗೆ ಮಗು ಚೇತರಿಸಿಕೊಳ್ಳುತ್ತಿದ್ದು, ಆಸ್ಪತ್ರೆಯ ವೈದ್ಯರು ಈತನನ್ನು "ಪವಾಡದ ಕಂದ" (Miracle Baby) ಎಂದು ಕರೆಯುತ್ತಿದ್ದಾರೆ. ಮಗುವಿನ ಚಿಕಿತ್ಸಾ ವೆಚ್ಚಕ್ಕಾಗಿ ಪಾಲಕರು 'ಗೋಫಂಡ್‌ಮಿ' (GoFundMe) ಮೂಲಕ ನಿಧಿ ಸಂಗ್ರಹಿಸುತ್ತಿದ್ದು, ಈಗಾಗಲೇ 25,751 ಡಾಲರ್ ಮೊತ್ತ ಸಂಗ್ರಹವಾಗಿದೆ.
ಆಸ್ಪತ್ರೆ ಮತ್ತು ವೈದ್ಯರ ವಿರುದ್ಧ ಕಾನೂನು ಸಮರಕ್ಕೆ ಸಿದ್ಧತೆ
ಜೀವಂತ ಲಕ್ಷಣಗಳು ಕಂಡುಬಂದರೂ ನಿರ್ಲಕ್ಷ್ಯ ವಹಿಸಿ ಮಗುವನ್ನು ಮೃತ ಎಂದು ಘೋಷಿಸಿದ ಆಸ್ಪತ್ರೆ ಮತ್ತು ವೈದ್ಯ ಡಾ. ಆರ್ಯನ್ ತೂಸಿ ಅವರ ವಿರುದ್ಧ ಅಧಿಕೃತವಾಗಿ ದೂರು ದಾಖಲಿಸಲು ಕುಟುಂಬ ಸಿದ್ಧತೆ ನಡೆಸಿದೆ. ಈ ನಡುವೆ, ಪೋಷಕರ ನಿರ್ಲಕ್ಷ್ಯದ ಬಗ್ಗೆ ತನಿಖೆ ನಡೆಸಿದ್ದ ಪೊಲೀಸರು, ಮನೆಯಲ್ಲಿ ಅಗತ್ಯ ಸುರಕ್ಷತಾ ಲಾಕ್‌ಗಳು ಇದ್ದ ಕಾರಣ ಪಾಲಕರ ಮೇಲೆ ಯಾವುದೇ ಕ್ರಿಮಿನಲ್ ಮೊಕದ್ದಮೆ ದಾಖಲಿಸಿಲ್ಲ. ವೈದ್ಯಕೀಯ ಸಿಬ್ಬಂದಿಯ ನಿರ್ಲಕ್ಷ್ಯದ ಕುರಿತ ಪರಿಶೀಲನೆಗಾಗಿ ಪ್ರಕರಣವನ್ನು ಅರಿಜೋನಾ ಅಟಾರ್ನಿ ಜನರಲ್ ಕಚೇರಿಗೆ ರವಾನಿಸಲಾಗಿದೆ.