ಸದಲಗಾದಲ್ಲಿ ಆಹಾರ ಇಲಾಖೆಯ ಅಧಿಕಾರಿಗಳ ಭರ್ಜರಿ ದಾಳಿ
ಚಿಕ್ಕೋಡಿ: ಬಡವರಿಗೆ ವಿತರಿಸಬೇಕಾದ ಪಡಿತರ ಅಕ್ಕಿಯನ್ನು ಕಾಳಸಂತೆಗೆ ಪೂರೈಸಲು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಪ್ರಕರಣವನ್ನು ಚಿಕ್ಕೋಡಿ ತಾಲೂಕು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳು ಪತ್ತೆಹಚ್ಚಿ, ಸುಮಾರು ನಾಲ್ಕು ಟನ್ ಅಕ್ಕಿಯನ್ನು ವಶಪಡಿಸಿಕೊಂಡಿದ್ದಾರೆ.
ಸದಲಗಾ ಪಟ್ಟಣದ ಪ್ರಕಾಶ ನಗರ ಪ್ರದೇಶದಲ್ಲಿ ಈ ದಾಳಿ ನಡೆಸಲಾಗಿದ್ದು, ಖಚಿತ ಮಾಹಿತಿ ಮೇರೆಗೆ ಅಧಿಕಾರಿಗಳು ಕಾರ್ಯಾಚರಣೆ ಕೈಗೊಂಡಿದ್ದಾರೆ. ಚಿಕ್ಕೋಡಿ ಉಪ ವಿಭಾಗಾಧಿಕಾರಿ (ಎಸಿ) ಸುಭಾಷ ಸಂಪಗಾವಿ ಹಾಗೂ ತಹಶಿಲ್ದಾರ ರಾಜೇಶ್ ಬುರ್ಲಿ ಅವರ ಮಾರ್ಗದರ್ಶನದಲ್ಲಿ ದಾಳಿ ನಡೆದಿದ್ದು, ಚಿಕ್ಕೋಡಿ ತಾಲೂಕು ಆಹಾರ ನಿರೀಕ್ಷಕಿ ಶ್ರೀಮತಿ ಐಶ್ವರ್ಯ ದಿವಟೆ, ಆಹಾರ ಶಿರಸ್ತೇದಾರ ಹನುಮಂತ ಖಾಂಡೇಕರ್ ಹಾಗೂ ಸದಲಗಾ ಪೊಲೀಸ್ ಠಾಣೆಯ ಪಿಎಸ್ಐ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು.
ದಾಳಿಯ ವೇಳೆ ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ಬಡವರಿಗೆ ಪೂರೈಕೆಯಾಗಬೇಕಾದ ಪಡಿತರ ಅಕ್ಕಿಯನ್ನು ಚೀಲಗಳಲ್ಲಿ ಸಂಗ್ರಹಿಸಿ ಕಾಳಸಂತೆಗೆ ಸಾಗಿಸಲು ಸಿದ್ಧಪಡಿಸಲಾಗಿತ್ತು. ಈ ಅಕ್ರಮ ಕೃತ್ಯದ ಆರೋಪವನ್ನು ಸುನೀಲ ಬಾಗಡಿ ಎಂಬಾತನ ಮೇಲೆ ಹೊರಿಸಲಾಗಿದೆ. ಅಧಿಕಾರಿಗಳು ಸ್ಥಳದಿಂದ ಸುಮಾರು 4 ಟನ್ಗೂ ಅಧಿಕ ಅಕ್ಕಿ ಚೀಲಗಳನ್ನು ವಶಕ್ಕೆ ಪಡೆದಿದ್ದಾರೆ.
ಬಡವರ ಅನ್ನದ ತಟ್ಟೆಗೆ ಸೇರಬೇಕಾದ ಅಕ್ಕಿಯನ್ನು ಲಾಭಕ್ಕಾಗಿ ಕಾಳಸಂತೆಗೆ ಸಾಗಿಸುವ ಉದ್ದೇಶದಿಂದ ಸಂಗ್ರಹಿಸಲಾಗಿದ್ದುದನ್ನು ಪತ್ತೆಹಚ್ಚಿದ ಆಹಾರ ಇಲಾಖೆಯ ಅಧಿಕಾರಿಗಳ ಕಾರ್ಯಾಚರಣೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಈ ದಾಳಿ ಕಾಳಸಂತೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಸಂಬಂಧ ಸದಲಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಅಕ್ಕಿ ಸಂಗ್ರಹ ಮತ್ತು ಸಾಗಣೆ ಜಾಲದ ಹಿಂದೆ ಇನ್ನೂ ಯಾರಾದರೂ ಭಾಗಿಯಾಗಿರುವ ಸಾಧ್ಯತೆ ಕುರಿತು ತನಿಖೆ ಮುಂದುವರಿದಿದೆ. ಅಕ್ರಮ ಪಡಿತರ ವಹಿವಾಟು ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಕಾರ್ಯಕ್ರಮದ ಕೊನೆಯಲ್ಲಿ ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ನಲಿನಿ ವೇಮುಲ್ಕರ್ ಅವರು ವಂದನಾ ಸಮರ್ಪಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮುಕ್ತಾಯಗೊಳಿಸಿದರು. ಒಟ್ಟಾರೆ, ಈ ಕಾರ್ಯಕ್ರಮ ಮಹಿಳೆಯರಿಗೆ ಕೌಶಲ್ಯಾಭಿವೃದ್ಧಿ ಹಾಗೂ ಉದ್ಯಮಶೀಲತಾ ಅರಿವು ಮೂಡಿಸುವಲ್ಲಿ ಪರಿಣಾಮಕಾರಿಯಾಯಿತು.