LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಶಾಲೆಗಳ ಸಹಯೋಗದಲ್ಲಿ ಬೆಂಗಳೂರು ಹವಾಮಾನ ಕಾರ್ಯಯೋಜನೆ ಕ್ಲಬ್ ಗಳ ರಚನೆ: ಡಿ.ಸಿ.ಎಂ ಡಿ.ಕೆ. ಶಿವಕುಮಾರ್

ಬೆಂಗಳೂರು: ಮಕ್ಕಳಲ್ಲಿ ಎಳೆ ವಯಸ್ಸಿನಲ್ಲಿ ಪರಿಸರ, ಹಸಿರು ಇಂಧನ, ಸ್ವಚ್ಛತೆ, ನೀರಿನ ಸಂರಕ್ಷಣೆ, ಗುಣಮಟ್ಟದ ಗಾಳಿ ಬಗ್ಗೆ ಅರಿವು ಮೂಡಿಸಲು ಜಿ.ಬಿ.ಎ ವ್ಯಾಪ್ತಿಯ ಶಾಲೆಗಳ ಸಹಯೋಗದಲ್ಲಿ ಬೆಂಗಳೂರು ಹವಾಮಾನ ಕಾರ್ಯಯೋಜನೆ ಕ್ಲಬ್ ರಚನೆ ಮಾಡಲಾಗುವುದು ಎಂದು ಡಿ.ಸಿ.ಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆದ ಡಿ.ಸಿ.ಎಂ ಡಿ.ಕೆ. ಶಿವಕುಮಾರ್ ಅವರು ಮಾಧ್ಯಮಗೋಷ್ಠಿ ನಡೆಸಿ ಮಾಹಿತಿ ನೀಡಿದರು. ಜೂನ್ 5 ರಂದು ವಿಶ್ವ ಪರಿಸರ ದಿನ ಹಿನ್ನೆಲೆಯಲ್ಲಿ ಬೆಂಗಳೂರು ಹವಾಮಾನ ಕಾರ್ಯಯೋಜನೆ (climate action plan) ಕ್ಲಬ್ ಸ್ಥಾಪಿಸಲಾಗುತ್ತಿದೆ. ಇದರಲ್ಲಿ ಓರ್ವ ಶಿಕ್ಷಕರು ಹಾಗೂ ಕನಿಷ್ಠ 25 ವಿದ್ಯಾರ್ಥಿಗಳನ್ನು ಒಳಗೊಂಡಂತೆ ಕ್ಲಬ್ ರಚಿಸಲಾಗುವುದು. ಇವರಿಗೆ ಅಗತ್ಯವಾದ ಪ್ರಮಾಣಪತ್ರ, ಬ್ಯಾಡ್ಜ್ ಗಳನ್ನು ನಾವು ನೀಡುತ್ತೇವೆ" ಎಂದು ತಿಳಿಸಿದರು.

ದೇಶದಲ್ಲಿ ಮುಂಬೈ, ಚೆನ್ನೈ ಹಾಗೂ ಬೆಂಗಳೂರು ಮೂರು ನಗರಗಳು ಹವಾಮಾನ ಕಾರ್ಯ ಯೋಜನೆಯಲ್ಲಿ ತೊಡಗಿಸಿಕೊಂಡಿವೆ. ಇದರ ಭಾಗವಾಗಿ ನಾವು ಹೊಸ ಯೋಜನೆಗಳನ್ನು ಹಮ್ಮಿಕೊಂಡಿದ್ದೇವೆ. ಜಿ.ಬಿ.ಎ ವ್ಯಾಪ್ತಿಯಲ್ಲಿ 6,000 ಶಾಲೆಗಳಿದ್ದು, ಇದರಲ್ಲಿ 4,500 ಖಾಸಗಿ ಹಾಗೂ 1,500 ಸರ್ಕಾರಿ ಶಾಲೆಗಳಿವೆ. ಈ ಎಲ್ಲಾ ಶಾಲೆಗಳು ಈ ಯೋಜನೆಯಲ್ಲಿ ಭಾಗವಹಿಸಲು ಮನವಿ ಮಾಡಲಾಗಿದೆ. ಇದಕ್ಕೆ ಈಗಾಗಲೇ 650 ಶಾಲೆಗಳು ಹಾಗೂ ಪಿಯು ಕಾಲೇಜುಗಳು ಒಪ್ಪಿಗೆ ನೀಡಿವೆ. ಈಗಾಗಲೇ 18 ಕ್ಲಬ್ ಗಳು ರಚನೆಯಾಗಿ ಕಾರ್ಯನಿರ್ವಹಿಸುತ್ತಿವೆ" ಎಂದು ತಿಳಿಸಿದರು.

ಈ ಕ್ಲಬ್ ಗಳನ್ನು ರಚಿಸಲು ಸಾರ್ವಜನಿಕ ಸಂಘ ಸಂಸ್ಥೆಗಳಿಗೂ ಅವಕಾಶ ನೀಡಲಾಗುವುದು. ಇವುಗಳ ನೋಂದಣಿಗೆ ಜೂನ್ 6 ರಂದು ವೆಬ್ ಸೈಟ್ ಅನಾವರಣಗೊಳಿಸಲಾಗುವುದು" ಎಂದರು.

ಇದರಲ್ಲಿ ಭಾಗವಹಿಸುವವರಿಗೆ ಬ್ಲೂ-ಗ್ರೀನ್ ಅವಾರ್ಡ್ ಗಳನ್ನು ನೀಡಲಾಗುವುದು. ಈ ಕ್ಲಬ್ ಗಳು ಹಸಿರು ಇಂಧನ, ಘನ ತ್ಯಾಜ್ಯ ನಿರ್ವಹಣೆ, ಗಾಳಿ ಗುಣಮಟ್ಟ, ತ್ಯಾಜ್ಯ ನೀರು, ಮಳೆನೀರು, ನಗರ ಯೋಜನೆ, ವಿಪತ್ತು ನಿರ್ವಹಣೆ ವಿಚಾರಗಳು ಒಳಗೊಂಡಿರುತ್ತದೆ. ಈ ವಿಚಾರಗಳ ಮೇಲೆ ಪ್ರಶಸ್ತಿಯನ್ನು ನೀಡಲಾಗುವುದು. 175 ಮಂದಿ, ಸಂಘ ಸಂಸ್ಥೆಗಳು ಈ ಪ್ರಶಸ್ತಿಗೆ ಆಯ್ಕೆಯಾಗಿವೆ. ಈ ಪ್ರಶಸ್ತಿ ಆಯ್ಕೆಗೆ 15 ತೀರ್ಪುಗಾರರ ತಂಡವನ್ನು ನೇಮಿಸಲಾಗಿದೆ" ಎಂದರು.

2025 ರ ಜೂನ್ 6 ರಂದು ಸಂಜೆ ನೆಹರೂ ತಾರಾಲಯದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಂದು ವಸ್ತು ಪ್ರದರ್ಶನವನ್ನು ನಾವು ಆಯೋಜಿಸಿದ್ದೇವೆ. ಮುಂದಿನ ದಿನಗಳಲ್ಲಿ ಈ ಕ್ಲಬ್ ಮೂಲಕ ರಸಪ್ರಶ್ನೆ, ಚರ್ಚಾ ಸ್ಪರ್ಧೆ ಆಯೋಜಿಸಿ, ಮಕ್ಕಳಲ್ಲಿ ಈ ವಿಚಾರವಾಗಿ ಜಾಗೃತಿ ಮೂಡಿಸಲು ಹಮ್ಮಿಕೊಳ್ಳಲಾಗುವುದು" ಎಂದು ಹೇಳಿದರು.

"ನಾವು ವಿದ್ಯುತ್ ಚಾಲಿತ ವಾಹನಗಳಿಗೆ ಆದ್ಯತೆ ನೀಡಲಾಗುತ್ತಿದ್ದು, ಸಾರಿಗೆ ಇಲಾಖೆಯಲ್ಲಿ ಸಾವಿರಾರು ಬಸ್ ಖರೀದಿ ಮಾಡಲಾಗಿದೆ. ಇನ್ನು ಎಲೆಕ್ಟ್ರಿಕ್ ವಾಹನ ಖರೀದಿಗೆ ಪ್ರೋತ್ಸಾಹ ನೀಡಲಾಗುತ್ತಿವೆ. ನಾನು ಬೆಂಗಳೂರು ನಗರಾಭಿವೃದ್ಧಿ ಸಚಿವನಾದ ಬಳಿಕ ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ ಶಾಲೆಗಳ ಸಹಯೋಗದಲ್ಲಿ ಮಕ್ಕಳ ಕೈಯಲ್ಲಿ ಮರ ಬೆಳೆಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ" ಎಂದರು.

*ಕಸ ವಿಲೇವಾರಿಗೆ ಕಾರ್ಯಕ್ರಮ*

"2025 ರ ಜೂನ್ 6 ರಂದು ಸ್ವಚ್ಛ ಬೆಂಗಳೂರು ಯೋಜನೆ ಹಾಗೂ ಕಾರ್ಯಯೋಜನೆ ಘೋಷಣೆ ಮಾಡಲಾಗುವುದು. ಬೆಂಗಳೂರಿನಲ್ಲಿರುವ ಕಸವನ್ನು ಒಂದು ಬಾರಿಗೆ ತೆಗೆಯಬೇಕು ಎಂದು ತೀರ್ಮಾನಿಸಲಾಗಿದೆ. ಕಸವಿರುವ ಜಾಗದ ಬಗ್ಗೆ ಸಾರ್ವಜನಿಕರು ಜಿ.ಬಿ.ಎ ಅಧಿಕಾರಿಗಳಿಗೆ ಮಾಹಿತಿ ನೀಡಬಹುದು. ಈ ಮಾಹಿತಿ ಬಂದ ನಂತರ ಅಧಿಕಾರಿಗಳು ಕಸ ವಿಲೇವಾರಿ ಮಾಡಲಿದ್ದಾರೆ" ಎಂದರು.

"ಇನ್ನು ರಸ್ತೆ ಬದಿಯಲ್ಲಿ ಕಸ ತಂದು ಸುರಿಯುವುದನ್ನು ತಪ್ಪಿಸಲು ಹೆಚ್ಚು ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಲಾಗುವುದು. ಇನ್ನು ಬೆಂಗಳೂರಿನಲ್ಲಿ ಪ್ಲಾಸ್ಟಿಕ್ ನಿಷೇಧಕ್ಕೆ ಕ್ರಮ ಕೈಗೊಂಡಿದ್ದೇವೆ" ಎಂದು ಮಾಹಿತಿ ನೀಡಿದರು.

"2023-24ನೇ ಸಾಲಿನಲ್ಲಿ 19 ಹೊಸ ಪಾರ್ಕ್ ಅಭಿವೃದ್ಧಿ ಮಾಡಿ, 47 ಪಾರ್ಕ್ ಗಳನ್ನು ಮೇಲ್ದರ್ಜೆಗೆ ಏರಿಸಿದ್ದೇವೆ. 19 ಕೆರೆಗಳ ಅಭಿವೃದ್ಧಿ ಮಾಡಿ, 40 ಕೆರೆಗಳಿಗೆ ಬೇಲಿ ಹಾಕಲಾಗಿದೆ. ಇದಕ್ಕಾಗಿ ರೂ.34.50 ಕೋಟಿ ವೆಚ್ಚ ಮಾಡಲಾಗಿದೆ. ಕೆರೆಗಳ ಅಭಿವೃದ್ಧಿಗೆ ರೂ.55 ಕೋಟಿ ವೆಚ್ಚ ಮಾಡುತ್ತಿದ್ದು, ಜುಲೈ ವೇಳೆಗೆ 4 ಕೆರೆಗಳ ಅಭಿವೃದ್ಧಿ ಪೂರ್ಣಗೊಳ್ಳಲಿದೆ. 2025-26ನೇ ಸಾಲಿನಲ್ಲಿ ಉದ್ಯಾನವನಗಳ ಮೇಲ್ದರ್ಜೆಗೇರಿಸಲು ರೂ.80 ಕೋಟಿ ಅನುದಾನ ಮೀಸಲಿಡಲಾಗಿದೆ. ಕೆರೆಗಳ ಅಭಿವೃದ್ಧಿಗೆ ರೂ.250 ಕೋಟಿ ಮೀಸಲಿಡಲಾಗಿದೆ" ಎಂದರು.

"ನ್ಯಾಯಾಲಯದ ನಿರ್ದೇಶನ ಮೇರೆಗೆ ನಗರದಲ್ಲಿ ಮರಗಣತಿ ಮಾಡಲು ತೀರ್ಮಾನಿಸಿದ್ದು, ಮಹದೇವಪುರ ಹಾಗೂ ಬೊಮ್ಮನಹಳ್ಳಿಯಲ್ಲಿ ಪ್ರಾಯೋಗಿಕ ಯೋಜನೆ ಮಾಡಲಾಗಿದೆ. ಪ್ರತಿ ವಿಧಾನ ಸಭಾ ಕ್ಷೇತ್ರದಲ್ಲಿ ಒಂದೊಂದು ವಾರ್ಡಿಗೆ ರೂ.1 ಕೋಟಿ ಮೀಸಲಿಟ್ಟು ಬೆಂಗಳೂರು ಗ್ರೀನ್ ವಾರ್ಡ್ ಆಗಿ ಮಾಡಲಾಗುವುದು" ಎಂದು ತಿಳಿಸಿದರು.

*ಪ್ರಶ್ನೋತ್ತರ*

ಈ ಕ್ಲಬ್ ಗಳ ಕಾರ್ಯಚಟುವಟಿಕೆ ಮೇಲ್ವಿಚಾರಣೆ ಮಾಡಲಾಗುವುದೇ ಎಂದು ಕೇಳಿದಾಗ, "ಇದರ ಮೇಲ್ವಿಚಾರಣೆಗೆ ಅಧಿಕಾರಿಗಳ ತಂಡ ನೇಮಿಸಲಾಗಿದೆ. ವಿಶೇಷ ಆಯುಕ್ತರು ಇದರ ಭಾಗವಾಗಿರುತ್ತಾರೆ. ಐಎಎಸ್ ಅಧಿಕಾರಿ ಪ್ರೀತಿ ಗೆಹ್ಲೋಟ್ ಅವರ ತಂಡ ಕೂಡ ಇದರಲ್ಲಿ ಕಾರ್ಯನಿರ್ವಹಿಸುತ್ತಿದೆ. ಈಗಾಗಲೇ ನೂರಾರು ಶಾಲೆಗಳನ್ನು ನೋಂದಣಿ ಮಾಡಲಾಗಿದೆ" ಎಂದು ತಿಳಿಸಿದರು.

ವಾಹನಗಳ ಹೊಗೆಯಿಂದ ವಾಯುಮಾಲಿನ್ಯ ಹೆಚ್ಚುತ್ತಿದೆ ಎಂದು ಕೇಳಿದಾಗ, "ಇದಕ್ಕಾಗಿ ನಾವು ಸಾರಿಗೆ ಇಲಾಖೆ ಒಳಪಡಿಸಿಕೊಂಡಿದ್ದೇವೆ. ಮೊದಲು ಸಾರಿಗೆ ಇಲಾಖೆ ಬಸ್ ಗಳ ಸಮಸ್ಯೆ ಬಗೆಹರಿಸಲಿದ್ದೇವೆ. ಎಲೆಕ್ಟ್ರಿಕ್ ವಾಹನಗಳಿಗೆ ಪ್ರೋತ್ಸಾಹ ನೀಡುತ್ತಿದ್ದೇವೆ" ಎಂದು ತಿಳಿಸಿದರು.

ಮರಗಣತಿ ಬಗ್ಗೆ ಕೇಳಿದಾಗ, "ಈಗಾಗಲೇ ನಾವು 6.50 ಲಕ್ಷ ಮರಗಳನ್ನು ಗುರುತಿಸಿದ್ದೇವೆ" ಎಂದು ತಿಳಿಸಿದರು.

ಕಸದ ಸಮಸ್ಯೆ ಹೆಚ್ಚಾಗಿದ್ದು, ಮಾರ್ಷಲ್ ಗಳು ಏನು ಮಾಡುತ್ತಿದ್ದಾರೆ ಎಂದು ಕೇಳಿದಾಗ, ಮಾರ್ಷಲ್ ಗಳು ಅವರ ಕೆಲಸ ಮಾಡುತ್ತಿದ್ದಾರೆ. ಬೆಂಗಳೂರಿನಲ್ಲಿ ಸುಮಾರು 1.50 ಕೋಟಿ ಜನಸಂಖ್ಯೆ ಇದೆ. ಇಲ್ಲಿ ಸಾರ್ವಜನಿಕರ ಸಹಕಾರ ಮುಖ್ಯ. ಅವರಲ್ಲಿ ಜಾಗೃತಿ ಮೂಡಿಸಬೇಕು. ಕಸ ಎಸೆದರೆ ವಿಧಿಸುವ ದಂಡ ಏರಿಕೆ ಮಾಡಲು ಚಿಂತಿಸುತ್ತಿದ್ದೇವೆ. ಖಾಲಿ ನಿವೇಶನಗಳ ಮಾಲೀಕರಿಗೆ ತಮ್ಮ ನಿವೇಶನ ಸ್ವಚ್ಛವಾಗಿಟ್ಟುಕೊಳ್ಳಲು ಸೂಚಿಸಲಾಗುವುದು. ನಗರದಲ್ಲಿ ನಿತ್ಯ 6 ಸಾವಿರ ಟನ್ ಕಸ ಉತ್ಪತ್ತಿಯಾಗುತ್ತಿದೆ" ಎಂದು ತಿಳಿಸಿದರು.

ಜಿ.ಬಿ.ಎ ಬೌಂಡರಿ ನಿಗದಿ ಯಾವಾಗ ಎಂದು ಕೇಳಿದಾಗ, "ಈಗ ಇರುವ ವ್ಯಾಪ್ತಿಯನ್ನೇ ಮಾಡಲು ಅಧಿಸೂಚನೆ ಹೊರಡಿಸಿದ್ದೇವೆ. ಇದು ಅಂತಿಮವಾಗಿದೆ. ಈ ವಿಚಾರವಾಗಿ ಸಚಿವರು ಹಾಗೂ ಸರ್ವಪಕ್ಷ ಶಾಸಕರು ಅನೇಕ ಸಲಹೆ ನೀಡಿದ್ದಾರೆ. ಈ ವಿಚಾರವಾಗಿ ಕೆಲವರ ಬಗ್ಗೆ ಮಾತನಾಡಬೇಕಿದ್ದು, ಎರಡು ಮೂರು ದಿನಗಳಲ್ಲಿ ಎಷ್ಟು ಪಾಲಿಕೆ ಮಾಡಬೇಕು ಎಂದು ತೀರ್ಮಾನಿಸಿ, ಇದಕ್ಕೆ ಅಂತಿಮ ರೂಪ ನೀಡಬೇಕು. ಈ ಪಾಲಿಕೆಗಳ ಚುನಾವಣೆ ನಡೆಸಬೇಕು. ನಂತರ ಯಾವ ಯಾವ ಪ್ರದೇಶಗಳನ್ನು ಸೇರಿಸಿಕೊಳ್ಳಬೇಕು ಎಂದು ತೀರ್ಮಾನಿಸಲಾಗುವುದು"* ಎಂದು ತಿಳಿಸಿದರು.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಚುನಾವಣಾನಿರತ ಸಿಬ್ಬಂದಿಗಳು, ರಾಜಕೀಯ ಪಕ್ಷಗಳ ಸಮರ್ಪಕ ಸಮನ್ವಯತೆಯಿಂದ ಪಾರದರ್ಶಕ ಚುನಾವಣೆ ಸಾಧ್ಯ: ಪೊಮ್ಮಲ ಸುನೀಲ್ ಕುಮಾರ್ಬಾಗಲೂರು ಹಾರ್ಡ್‌ವೇರ್ ಪಾರ್ಕ್‌ನಲ್ಲಿ ಜೆಟ್ವರ್ಕ್ ಉತ್ಪಾದನಾ ಸ್ಥಾವರಕ್ಕೆ ಚಾಲನೆ260 ಪೌರಕಾರ್ಮಿಕರು ಹಾಗೂ ಸ್ವಚ್ಛತಾ ಸಿಬ್ಬಂದಿಗಳು ಸ್ವಚ್ಛತೆ ಕಾರ್ಯದಲ್ಲಿ ಭಾಗಿಆನ್ ಲೈನ್ ಮೂಲಕ ಎಂಎಸ್ಐಎಲ್ ಚಿಟ್ ವ್ಯವಹಾರಕ್ಕೆ ಸಿಎಂ ಚಾಲನೆಬೆಂಗಳೂರು-ಮುಂಬೈ ಹೈಸ್ಪೀಡ್ ರೈಲು, ಬೆಂಗಳೂರು- ವಿಜಯಪುರ ವಂದೇ ಭಾರತ್ ರೈಲು ಮತ್ತು ದಿನವಹಿ ವಿಶೇಷ ರೈಲಿಗೆ ಕೋರಿಕೆಉಡಾನ್' ಯೋಜನೆ ಮೂಲಕ ಭಾರತದ ಭವಿಷ್ಯದ ವೈದ್ಯಕೀಯ ಕಾರ್ಯಪಡೆಯನ್ನು ನಿರ್ಮಿಸುವ ಬದ್ಧತೆಯನ್ನು ಸಾರಿದ ನಾರಾಯಣ ಹೆಲ್ತ್ಮೆಟ್ರೋ ಟಿಕೆಟ್ ದರ: ಕೇಂದ್ರದತ್ತ ಬೊಟ್ಟು ಮಾಡಿದ ರಾಜ್ಯ ಸರ್ಕಾರಕ್ಕೆ ದಾಖಲೆ ಸಮೇತ ಟಾಂಗ್ ಕೊಟ್ಟ ನಿಖಿಲ್ಬಿಜೆಪಿ ಜಾಹೀರಾತಿನ ವಿರುದ್ಧ ಎಎಪಿ ದೂರುಪೆರಿಫೆರಲ್ ರಿಂಗ್ ರಸ್ತೆ ನಿರ್ಮಾಣ, 20 ವರ್ಷ ಕಳೆದರೂ ರೈತರಿಗೆ ಸಿಗತ ಪರಿಹಾರಕಾಂಗ್ರೆಸ್ ಪಕ್ಷ ಪಾರ್ಕಿಂಗ್ ವಿಚಾರದಲ್ಲಿ ಅಂದಾ ದರ್ಬಾರ್ ಮಾಡಲು ಹೊರಟಿದೆ