ಹುಬ್ಬಳ್ಳಿ : ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಬ್ಬು ಬೆಳೆಗಾರರು ಹಮ್ಮಿಕೊಳ್ಳಲು ಉದ್ದೇಶಿಸಿದ್ದ ಪಾದಯಾತ್ರೆ ವಿಚಾರಕ್ಕೆ ಸಂಬಂಧಿಸಿದಂತೆ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ನೇತೃತ್ವದಲ್ಲಿ ನಡೆದ ಮಧ್ಯರಾತ್ರಿಯ ಸಭೆ ಯಶಸ್ವಿಯಾಗಿದೆ. ಹುಬ್ಬಳ್ಳಿಯ ಸರ್ಕ್ಯೂಟ್ ಹೌಸ್ನಲ್ಲಿ (ಐಬಿ) ನಡೆದ ಈ ಮಹತ್ವದ ಸಭೆಯಲ್ಲಿ ಚೂನಪ್ಪ ಪೂಜಾರಿ ಸೇರಿದಂತೆ 8 ಜನ ಪ್ರಮುಖ ರೈತ ಮುಖಂಡರು ಭಾಗವಹಿಸಿದ್ದರು. ಸಭೆಯಲ್ಲಿ ಸಂಸದ ಜಗದೀಶ್ ಶೆಟ್ಟರ್, ಶಾಸಕರಾದ ಮಹೇಶ್ ತೇಗಿನಕಾಯಿ, ಸಿ.ಸಿ. ಪಾಟೀಲ್ ಹಾಗೂ ಧಾರವಾಡ ಜಿಲ್ಲಾಧಿಕಾರಿ, ಎಸ್ಪಿ ಮತ್ತು ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಉಪಸ್ಥಿತರಿದ್ದು ರೈತರ ಅಹವಾಲುಗಳನ್ನು ಆಲಿಸಿದರು.
ರೈತರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವ ಸಂಬಂಧ ಕಬ್ಬು ಬೆಳೆಗಾರರ ಮನವೊಲಿಸುವಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಯಶಸ್ವಿಯಾಗಿದ್ದಾರೆ. ಬೇಡಿಕೆಗಳ ಈಡೇರಿಕೆಗಾಗಿ ಸ್ವಲ್ಪ ಕಾಲಾವಕಾಶ ನೀಡುವಂತೆ ಜೋಶಿ ಅವರು ಕೋರಿದ್ದು, ಇದಕ್ಕೆ ರೈತ ಮುಖಂಡರು ಸಮ್ಮತಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಹೋರಾಟವನ್ನು ಕೈಬಿಡುವ ಅಥವಾ ಮುಂದುವರಿಸುವ ಕುರಿತು ಇಂದು ಮತ್ತೊಮ್ಮೆ ರೈತರ ಜೊತೆ ಸಭೆ ನಡೆಯಲಿದ್ದು, ರೈತ ಮುಖಂಡರು ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ.