ಮೈಸೂರು : ಮೈಸೂರು ದಸರಾ ಗಜಪಡೆಯ ಹಿರಿಯ ಸದಸ್ಯ ಹಾಗೂ 54 ವರ್ಷ ವಯಸ್ಸಿನ 'ಪ್ರಶಾಂತ' ಆನೆಯು ಈ ಬಾರಿಯ ಜಂಬೂಸವಾರಿಯಲ್ಲಿ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಯೊಂದಿಗೆ 750 ಕೆ.ಜಿ. ತೂಕದ ಚಿನ್ನದ ಅಂಬಾರಿಯನ್ನು ಹೊರಲು ಅಧಿಕೃತವಾಗಿ ಆಯ್ಕೆಯಾಗಿದೆ. ಕಳೆದ 18 ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ನಿರಂತರವಾಗಿ ಭಾಗವಹಿಸುತ್ತಿರುವ ಪ್ರಶಾಂತ, ತನ್ನ ಸುದೀರ್ಘ ಅನುಭವ ಹಾಗೂ ದೈಹಿಕ ಸಾಮರ್ಥ್ಯದಿಂದ ಈ ಪ್ರತಿಷ್ಠಿತ ಜವಾಬ್ದಾರಿಯನ್ನು ಪಡೆದುಕೊಂಡಿದೆ.
ಅಲ್ಲದೆ, ಇದುವರೆಗೆ ತಿತಿಮತಿ, ಬಳ್ಳೆ ಹಾಗೂ ಮತ್ತಿಗೋಡು ಶಿಬಿರಗಳ ಆನೆಗಳು ಮಾತ್ರ ಅಂಬಾರಿ ಹೊರುವ ಪಾರುಪತ್ಯ ಮೆರೆದಿದ್ದವು. ಆದರೆ, ಅತಿ ಹೆಚ್ಚು ಆನೆಗಳನ್ನು ಹೊಂದಿರುವ ಪ್ರಸಿದ್ಧ ದುಬಾರೆ ಆನೆ ಶಿಬಿರದಿಂದ ಅಂಬಾರಿ ಹೊರಲು ಆಯ್ಕೆಯಾದ ಮೊದಲ ಆನೆ ಎಂಬ ಐತಿಹಾಸಿಕ ಹೆಗ್ಗಳಿಕೆಗೆ ಪ್ರಶಾಂತ ಪಾತ್ರವಾಗಿದೆ. ತಾಲೀಮಿನ ವೇಳೆ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸುವ ಮೂಲಕ ಅರಣ್ಯ ಇಲಾಖೆಯ ಅಧಿಕಾರಿಗಳ ವಿಶ್ವಾಸಗಳಿಸುವಲ್ಲಿ ಇದು ಯಶಸ್ವಿಯಾಗಿದೆ.
ಆನೆಗಳ ದೈಹಿಕ ಆರೋಗ್ಯ, ಭಾರ ಹೊರುವ ಸಾಮರ್ಥ್ಯ, ನಡಿಗೆಯ ಸ್ಥಿರತೆ ಮತ್ತು ಸಹನಶಕ್ತಿಯನ್ನು ಸಮಗ್ರವಾಗಿ ಪರಿಶೀಲಿಸಿ ಈ ಆಯ್ಕೆ ಮಾಡಲಾಗಿದೆ. ವಿಶೇಷವಾಗಿ ಪ್ರಶಾಂತ ಆನೆಯ ಬೆನ್ನಿನ ಮೇಲ್ಭಾಗವು ತುಲನಾತ್ಮಕವಾಗಿ ಸಮತಟ್ಟಾಗಿದ್ದು, 750 ಕೆ.ಜಿ. ತೂಕದ ಅಂಬಾರಿಯನ್ನು ಅತ್ಯಂತ ಸ್ಥಿರವಾಗಿ ಮತ್ತು ಸಮತೋಲನದಿಂದ ಹೊತ್ತು ಸಾಗಲು ಇದು ಅತ್ಯಂತ ಅನುಕೂಲಕರವಾದ ದೈಹಿಕ ವೈಶಿಷ್ಟ್ಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.