ಬೆಂಗಳೂರು: ಶ್ರಾವಣ ಮಾಸ ಮುಗಿಯುತ್ತಿದ್ದಂತೆ ಸಾಲು ಸಾಲು ಹಬ್ಬಗಳು ಆರಂಭವಾಗುತ್ತಿದ್ದು, ಮಾರುಕಟ್ಟೆಯಲ್ಲಿ ಸಿಹಿ ತಿಂಡಿಗಳಿಗೆ ಬೇಡಿಕೆ ಹೆಚ್ಚಾಗಿದೆ. ಆದರೆ, ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಈ ಸಿಹಿ ತಿನಿಸುಗಳು ಎಷ್ಟು ಸುರಕ್ಷಿತ ಮತ್ತು ಸ್ವಚ್ಛ ವಾತಾವರಣದಲ್ಲಿ ತಯಾರಾಗುತ್ತಿವೆ ಎಂಬುದು ಮುಖ್ಯವಾಗಿದೆ. ಈ ಹಿನ್ನೆಲೆಯಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (FSSAI) ಅಧಿಕಾರಿಗಳು ಬೆಂಗಳೂರಿನ ಹಲವು ಭಾಗಗಳಲ್ಲಿರುವ ಸ್ವೀಟ್ಸ್ ಮತ್ತು ಬೇಕರಿ ಉತ್ಪಾದನಾ ಘಟಕಗಳ ಮೇಲೆ ದಿಢೀರ್ ದಾಳಿ ನಡೆಸಿದ್ದಾರೆ. FSSAI ನಿಯಮಗಳನ್ನು ಗಾಳಿಗೆ ತೂರಿ, ಅಸ್ವಚ್ಛ ವಾತಾವರಣದಲ್ಲಿ ಸಿಹಿ ತಿನಿಸುಗಳು ಹಾಗೂ ಬೇಕರಿ ಪದಾರ್ಥಗಳನ್ನು ತಯಾರಿಸಲಾಗುತ್ತಿದೆ ಎಂಬ ಸಾರ್ವಜನಿಕ ದೂರುಗಳ ಆಧಾರದ ಮೇಲೆ ಈ ಕಾರ್ಯಾಚರಣೆ ಕೈಗೊಳ್ಳಲಾಗಿದೆ.
ಇಲಾಖೆಯ ಅಧಿಕಾರಿಗಳು ವಿಶೇಷ ಕಾರ್ಯಾಚರಣೆ ರೂಪಿಸಿ ರಾಜಧಾನಿಯ ಹಲವು ಪ್ರಮುಖ ಉತ್ಪಾದನಾ ಘಟಕಗಳಲ್ಲಿ ಶೋಧ ಕಾರ್ಯ ತೀವ್ರಗೊಳಿಸಿದ್ದಾರೆ. ದಾಳಿ ವೇಳೆ ಸ್ವೀಟ್ಸ್ ತಯಾರಿಕೆಗೆ ಬಳಸುವ ಕಚ್ಚಾ ಪದಾರ್ಥಗಳ ಗುಣಮಟ್ಟ, ನೈರ್ಮಲ್ಯದ ಸ್ಥಿತಿಗತಿ ಹಾಗೂ ಪರವಾನಗಿಗಳನ್ನು ಕೂಲಂಕುಷವಾಗಿ ಪರಿಶೀಲಿಸಲಾಗುತ್ತಿದೆ. ನಿಯಮ ಉಲ್ಲಂಘಿಸಿ ಸಾರ್ವಜನಿಕರ ಆರೋಗ್ಯದ ಜೊತೆ ಚೆಲ್ಲಾಟವಾಡುವ ಘಟಕಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವುದಾಗಿ ಅಧಿಕಾರಿಗಳು ಎಚ್ಚರಿಸಿದ್ದಾರೆ.