ಬೆಂಗಳೂರು: ಕೆಂಗೇರಿ ಸಮೀಪದ ಆರ್.ಆರ್. ವೈದ್ಯಕೀಯ ಕಾಲೇಜಿನ ಹಿಂಭಾಗದಲ್ಲಿ ಆನೆ ದಾಳಿ ನಡೆಸಿದ ಪರಿಣಾಮ ವ್ಯಕ್ತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಇಂದು ಬೆಳಗ್ಗಿನ ಜಾವ ನಡೆದಿದೆ. ಅಂಚೆಪಾಳ್ಯ ಗ್ರಾಮದ ನಿವಾಸಿ ನಾಗರಾಜ್ ಮೃತಪಟ್ಟ ದುರ್ದೈವಿಯಾಗಿದ್ದು, ಇಂದು ಮುಂಜಾನೆ ಸುಮಾರು 5 ಗಂಟೆಯ ವೇಳೆಗೆ ಈ ದುರಂತ ಸಂಭವಿಸಿದೆ. ದಿನನಿತ್ಯದಂತೆ ಬೆಳಗ್ಗೆ ವಾಕಿಂಗ್ ತೆರಳಿದ್ದ ವೇಳೆ ನಾಗರಾಜ್ ಅವರ ಮೇಲೆ ಆನೆ ಏಕಾಏಕಿ ದಾಳಿ ನಡೆಸಿರಬಹುದು ಎಂದು ಶಂಕಿಸಲಾಗಿದೆ.
ಘಟನಾ ಸ್ಥಳದಲ್ಲಿ ಬೃಹತ್ ಗಾತ್ರದ ಎರಡೂ ಕಾಂಪೌಂಡ್‌ಗಳು ಉರುಳಿಬಿದ್ದಿದ್ದು, ಪರಿಸರದಲ್ಲಿ ಆನೆ ಸಂಚಾರ ನಡೆಸಿರುವ ಸುಳಿವುಗಳು ಸಿಕ್ಕಿವೆ. ಹೀಗಾಗಿ ಸ್ಥಳೀಯರು ಸಹ ನಾಗರಾಜ್ ಅವರ ಸಾವು ಆನೆ ದಾಳಿಯಿಂದಲೇ ಸಂಭವಿಸಿದೆ ಎಂದು ತೀವ್ರ ಸಂಶಯ ವ್ಯಕ್ತಪಡಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಹಾಗೂ ಅರಣ್ಯಾಧಿಕಾರಿಗಳು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಆನೆ ನಗರದ ಅಂಚಿನ ಪ್ರದೇಶಕ್ಕೆ ಹೇಗೆ ಬಂತು ಎಂಬುದರ ಕುರಿತು ಅರಣ್ಯ ಇಲಾಖೆ ತನಿಖೆ ಆರಂಭಿಸಿದೆ.