ಬೆಂಗಳೂರು: ಗೃಹ ಸಾಲ ಪಡೆದ ಮುಗ್ಧ ಖರೀದಿದಾರರಿಗೆ ಕರ್ನಾಟಕ ಹೈಕೋರ್ಟ್ ದೊಡ್ಡ ರಿಲೀಫ್ ನೀಡಿದ್ದು, ಬಿಲ್ಡರ್ಗಳ ತಪ್ಪಿಗೆ ಸಾಲಗಾರರನ್ನು ಹೊಣೆಗಾರರನ್ನಾಗಿ ಮಾಡುವಂತಿಲ್ಲ ಹಾಗೂ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತಿಲ್ಲ ಎಂದು ಮಹತ್ವದ ತೀರ್ಪು ಪ್ರಕಟಿಸಿದೆ. ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ಹೊರಡಿಸಿದೆ.
ಒಬ್ಬ ಗೃಹ ಖರೀದಿದಾರರಿಗೆ ಫ್ಲ್ಯಾಟ್ ನೀಡುವುದಾಗಿ ಒಪ್ಪಂದ ಮಾಡಿಕೊಂಡು, ಅವರ ಗಮನಕ್ಕೆ ತರದೆ ಅದೇ ಫ್ಲ್ಯಾಟ್ ಅನ್ನು ಮೂರನೇ ವ್ಯಕ್ತಿಗೆ ಮರುಮಾರಾಟ ಮಾಡುವ ಬಿಲ್ಡರ್ಗಳ ಕಳ್ಳಾಟಕ್ಕೆ ಈ ತೀರ್ಪು ಬ್ರೇಕ್ ಹಾಕಿದೆ. ಪ್ರಾಜೆಕ್ಟ್ ಪೂರ್ಣಗೊಳಿಸದ ಬಿಲ್ಡರ್ಗಳು ಮತ್ತು ಸಾಲ ವಸೂಲಿಗೆ ಮುಂದಾಗುವ ಬ್ಯಾಂಕ್ಗಳ ಧೋರಣೆಗೆ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಪ್ರಕರಣದ ಹಿನ್ನೆಲೆ?
ಮುಂಬೈನ ಪ್ರೀತೇಶ್ ಬಾರಿ ಎಂಬವರು ಪ್ರತಿಷ್ಠಿತ ಬ್ಯಾಂಕ್ನಿಂದ 39.92 ಲಕ್ಷ ರೂಪಾಯಿ ಗೃಹ ಸಾಲ ಪಡೆದಿದ್ದರು. ಆದರೆ ಬಿಲ್ಡರ್ ಕಾಲಮಿತಿಯೊಳಗೆ ಯೋಜನೆ ಪೂರ್ಣಗೊಳಿಸದೆ, ಆ ಫ್ಲ್ಯಾಟ್ ಅನ್ನು 2023ರಲ್ಲಿ ಬೇರೊಬ್ಬರಿಗೆ ಮಾರಾಟ ಮಾಡಿದ್ದರು. ಸಾಲದ ಕಂತು ಪಾವತಿಸಿಲ್ಲವೆಂದು ಬ್ಯಾಂಕ್ ದೂರು ದಾಖಲಿಸಿ, ಮ್ಯಾಜಿಸ್ಟ್ರೇಟ್ ಕೋರ್ಟ್ ಆದೇಶದಂತೆ ಬೆಂಗಳೂರಿನ ಶಂಕರಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್, ತ್ರಿಪಕ್ಷೀಯ ಒಪ್ಪಂದದ ಪ್ರಕಾರ ಬಿಲ್ಡರ್ ಯೋಜನೆ ಕೈಬಿಟ್ಟರೆ ಅಥವಾ ವಿಫಲವಾದರೆ ಬ್ಯಾಂಕ್ನಿಂದ ಪಡೆದ ಸಂಪೂರ್ಣ ಹಣವನ್ನು ಬಿಲ್ಡರ್ಗಳೇ ಹಿಂದಿರುಗಿಸಬೇಕು ಎಂದು ಸ್ಪಷ್ಟಪಡಿಸಿದೆ. ಫ್ಲ್ಯಾಟ್ ಮರುಮಾರಾಟದಲ್ಲಿ ಸಾಲಗಾರನ ಯಾವುದೇ ಪಾತ್ರವಿರಲಿಲ್ಲ ಹಾಗೂ ಆತನಿಗೆ ಯಾವುದೇ ಆರ್ಥಿಕ ಲಾಭ ದೊರೆತಿಲ್ಲ ಎಂಬುದನ್ನು ಬ್ಯಾಂಕ್ ಸಾಬೀತುಪಡಿಸದ ಕಾರಣ, ಕೇವಲ ಸಾಲ ಬಾಕಿ ಉಳಿದಿದೆ ಎಂಬ ಕಾರಣಕ್ಕೆ ವಂಚನೆ ಆರೋಪ ಹೊರಿಸಲಾಗದು ಎಂದು ತಿಳಿಸಿದೆ.
ಹಣಕಾಸು ಬಾಧ್ಯತೆ ಮತ್ತು ಕ್ರಿಮಿನಲ್ ಹೊಣೆಗಾರಿಕೆ ಪ್ರತ್ಯೇಕವಾಗಿದ್ದು, ಆರಂಭದಿಂದಲೇ ವಂಚಿಸುವ ಉದ್ದೇಶವಿತ್ತೆಂಬ ಮೂಲಭೂತ ಸಾಕ್ಷ್ಯವಿಲ್ಲದೆ ಕೇವಲ ಸಾಲ ವಸೂಲಿಗೆ ಕ್ರಿಮಿನಲ್ ಕಾನೂನನ್ನು ದುರುಪಯೋಗಪಡಿಸಿಕೊಳ್ಳಬಾರದು ಎಂದು ಪೀಠ ಎಚ್ಚರಿಸಿದೆ. ಈ ಹಿನ್ನೆಲೆಯಲ್ಲಿ ಅರ್ಜಿದಾರರ ವಿರುದ್ಧ ದಾಖಲಾಗಿದ್ದ ಎಫ್ಐಆರ್ ಮತ್ತು ಕ್ರಿಮಿನಲ್ ವಿಚಾರಣೆಯನ್ನು ಹೈಕೋರ್ಟ್ ರದ್ದುಗೊಳಿಸಿದೆ.