ನವದೆಹಲಿ: ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ನಲ್ಲಿ ಇಂದು ನ್ಯಾಯಮೂರ್ತಿ ವಿಕ್ರಮನಾಥ್ ನೇತೃತ್ವದ ಪೀಠದಲ್ಲಿ ಮಹತ್ವದ ವಿಚಾರಣೆ ನಡೆಯಲಿದೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಆದೇಶದಂತೆ ತಮಿಳುನಾಡಿಗೆ ಸರಿಯಾದ ಪ್ರಮಾಣದಲ್ಲಿ ನೀರು ಬಿಡುತ್ತಿಲ್ಲ ಎಂದು ಆರೋಪಿಸಿರುವ ತಮಿಳುನಾಡು ಸರ್ಕಾರ, ಬಾಕಿ ನೀರನ್ನು ಕೂಡಲೇ ಹರಿಸಲು ಕೋರಿ ಮನವಿ ಸಲ್ಲಿಸಿದೆ.
ಇತ್ತ, ರಾಜ್ಯದ ಜಲಾಶಯಗಳಲ್ಲಿ ನೀರಿನ ಸಂಗ್ರಹವಿಲ್ಲದಿರುವ ಕಾರಣ ತಮಿಳುನಾಡಿಗೆ ನಿಗದಿತ ಪ್ರಮಾಣದಲ್ಲಿ ನೀರು ಬಿಡುವುದು ಕಷ್ಟ ಎಂದು ಕರ್ನಾಟಕ ಸರ್ಕಾರ ತನ್ನ ವಾದವನ್ನು ಮಂಡಿಸುತ್ತಾ ಬಂದಿದೆ. ಕಳೆದ ವಿಚಾರಣೆಯ ವೇಳೆ ಸಿಡಬ್ಲ್ಯೂಎಂಎ ಆದೇಶವನ್ನು ಪಾಲಿಸುವಂತೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದ್ದ ಹಿನ್ನೆಲೆಯಲ್ಲಿ, ಇಂದಿನ ವಿಚಾರಣೆಯು ಎರಡೂ ರಾಜ್ಯಗಳ ಪಾಲಿಗೆ ಅತ್ಯಂತ ಮಹತ್ವದ್ದಾಗಿದ್ದು, ನ್ಯಾಯಾಲಯದ ಅಂತಿಮ ನಿರ್ಧಾರದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.