ತುಮಕೂರು: ಗುಬ್ಬಿ ಜೆಡಿಎಸ್ ಮುಖಂಡ ನಾಗರಾಜ್ ಗೆ ಹನಿಟ್ರ್ಯಾಪ್ ಮಾಡಲು ಸಂಚು ರೂಪಿಸಿರುವ ಘಟನೆ ಬೆಳಕಿಗೆ ಬಂದಿದೆ. ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್, ಪುತ್ರ ದುಷ್ಯಂತ್ ಸೇರಿ ನನ್ನನ್ನು ಹನಿಟ್ರ್ಯಾಪ್ ಜಾಲದಲ್ಲಿ ಸಿಲುಕಿಸಲು ಯತ್ನಿಸುತ್ತಿದ್ದಾರೆ ಎಂದು ಸ್ವತಃ ನಾಗರಾಜ್ ಆರೋಪಿಸಿದ್ದಾರೆ.
ತುಮಕೂರಿನ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ನಾಗರಾಜ್, ಹನಿಟ್ರ್ಯಾಪ್ ಬಗ್ಗೆ ದುಷ್ಯಂತ್ ಜೊತೆ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಬಿಡುಗಡೆ ಮಾಡಿದರು. ನನ್ನನ್ನು ಹನಿಟ್ರ್ಯಾಪ್ ಜಾಲದಲ್ಲಿ ಬೀಳಿಸುವ ಪ್ರಯತ್ನ ನಡೆದಿದೆ. ಮುಂಬರುವ ಚುನಾವಣೆಯಲ್ಲಿ ನನ್ನನ್ನು ಸೋಲಿಸಲು ಈಗಿನಿಂದಲೇ ಕುತಂತ್ರ ನಡೆಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಹಣದ ಆಮಿಷವೊಡ್ಡಿ ನನ್ನ ಚಲನವಲನಗಳನ್ನು ತಿಳಿದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ಶ್ರೀನಿವಾಸ್ ಫ್ಲ್ಯಾಟ್ ನಲ್ಲಿ ನನ್ನ ಡ್ರೈವರ್ ಕರೆಸಿ ಕುತಂತ್ರ ಮಾಡುತ್ತಿದ್ದಾರೆ. ನಾಗರಾಜ್ ಗೆ ಅಕ್ರಮ ಸಂಬಂಧವಿದೆಯಾ? ಎಂದು ವಿಚಾರಿಸಿದ್ದಾರೆ. ನಾನು ಶಾಸಕ ಎಸ್.ಆರ್.ಶ್ರೀನಿವಾಸ್ ಗೆ ಪ್ರಬಲ ಎದುರಾಳಿ. ಹಾಗಾಗಿ ಮುಂದಿನ ಚುನಾವಣೆಗೆ ಈಗಿನಿಂದಲೇ ಕುತಂತ್ರ ನಡೆಸುತ್ತಿದ್ದಾರೆ. ಈ ರೀತಿ ವಾಮಮಾರ್ಗದಲ್ಲಿ ರಾಜಕಾರಣ ಯಾವತ್ತೂ ಮಾಡಬಾರದು ಎಂದು ಕಿಡಿಕಾರಿದರು.