ನವದೆಹಲಿ: ಕೆಪಿಎಸ್ಸಿ ಪಶುವೈದ್ಯಾಧಿಕಾರಿ ನೇಮಕಾತಿ ಹಗರಣದ ತನಿಖೆಗಾಗಿ ಹೈಕೋರ್ಟ್ ರಚಿಸಿದ್ದ ಎಸ್ಐಟಿ (SIT) ತಂಡಕ್ಕೆ ಸುಪ್ರೀಂಕೋರ್ಟ್ನಿಂದ ಮಹತ್ವದ ತಿದ್ದುಪಡಿ ಮಾಡಲಾಗಿದೆ. ತನಿಖಾ ತಂಡದ ಮುಖ್ಯಸ್ಥರಾಗಿದ್ದ ಡಿಜಿಪಿ ಅಲೋಕ್ ಕುಮಾರ್ ಹಾಗೂ ವಿಧಿವಿಜ್ಞಾನ ಪ್ರಯೋಗಾಲಯದ ಮುಖ್ಯಸ್ಥೆ ದಿವ್ಯಾ ಗೋಪಿನಾಥ್ ಅವರನ್ನು ಎಸ್ಐಟಿಯಿಂದ ಬದಲಾಯಿಸಲು ಸುಪ್ರೀಂಕೋರ್ಟ್ ಸಮ್ಮತಿಸಿದೆ. ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ವೇಳೆ ಈ ಮಹತ್ವದ ತೀರ್ಪು ಹೊರಬಿದ್ದಿದೆ.
ವಿಚಾರಣೆ ವೇಳೆ ಸರ್ಕಾರದ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, ಡಿಜಿಪಿ ಅಲೋಕ್ ಕುಮಾರ್ ವಿರುದ್ಧ ಹಿಂದೆ ಫೋನ್ ಟ್ಯಾಪಿಂಗ್ ಆರೋಪಗಳಿದ್ದವು ಹಾಗೂ ಎಫ್ಎಸ್ಎಲ್ (FSL) ಮುಖ್ಯಸ್ಥರೇ ತನಿಖಾಧಿಕಾರಿಯಾದರೆ ಹಿತಾಸಕ್ತಿಯ ಸಂಘರ್ಷ ಉಂಟಾಗಲಿದೆ ಎಂದು ವಾದಿಸಿದ್ದರು. ಇದನ್ನು ಪರಿಗಣಿಸಿದ ಸುಪ್ರೀಂಕೋರ್ಟ್, ಎಸ್ಐಟಿ ರಚನೆಗೆ ತಡೆ ನೀಡದಿದ್ದರೂ, ಈ ಇಬ್ಬರು ಅಧಿಕಾರಿಗಳನ್ನು ಬದಲಿಸಲು ಸೂಚಿಸಿದೆ. ಜೊತೆಗೆ, ಎಸ್ಐಟಿಗೆ ಹೊಸ ಮುಖ್ಯಸ್ಥರನ್ನು ಆಯ್ಕೆ ಮಾಡುವ ಅಧಿಕಾರವನ್ನು ಪೊಲೀಸ್ ಮಹಾನಿರ್ದೇಶಕರಿಗೆ (ಡಿಜಿಪಿ) ವಹಿಸಿದ್ದು, ಆಯ್ಕೆಯಾದವರ ಪಟ್ಟಿಯನ್ನು ಹೈಕೋರ್ಟ್ಗೆ ಸಲ್ಲಿಸುವಂತೆ ನಿರ್ದೇಶಿಸಿದೆ. ಇದೇ ವೇಳೆ, ಈ ಪ್ರಕರಣದಲ್ಲಿ ತನಿಖೆಯ ದೋಷಾರೋಪ ಪಟ್ಟಿ (ಚಾರ್ಜ್ಶೀಟ್) ಸಲ್ಲಿಸದಂತೆ ಸಿಐಡಿಗೆ ಸೂಚನೆ ನೀಡಲಾಗಿದೆ.