ಬೆಂಗಳೂರು: ರಾಜ್ಯ ಸಚಿವ ಸಂಪುಟ ಪುನರಚನೆ ಕುರಿತ ಚರ್ಚೆ ತೀವ್ರಗೊಂಡ ಬೆನ್ನಲ್ಲೇ ಕಾಂಗ್ರೆಸ್ ನಲ್ಲಿ ಚಟುವಟಿಕೆಗಳು ಚುರುಕುಗೊಂಡಿವೆ. ಸಚಿವಾಕಾಂಕ್ಷಿ ಶಾಸಕರು ಮತ್ತು ಹಾಲಿ ಸಚಿವರು ದೆಹಲಿಗೆ ದೌಡಾಯಿಸಿದ್ದಾರೆ.
ಕಾಂಗ್ರೆಸ್ ಹೈಕಮಾಂಡ್ ಭೇಟಿಯಾಗಲು ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಸಚಿವ ಕೃಷ್ಣ ಬೈರೇಗೌಡ, ಶಾಸಕರಾದ ರಿಜ್ವಾನ್ ಅರ್ಷದ್ ಮತ್ತು ಶ್ರೀನಿವಾಸ್ ಮಾನೆ ಸೇರಿದಂತೆ ಐವರು ನಾಯಕರು ದೆಹಲಿಗೆ ತೆರಳಿದ್ದಾರೆ.
ಕೃಷ್ಣ ಬೈರೇಗೌಡರು ತಮ್ಮ ಸಚಿವ ಸ್ಥಾನವನ್ನು ಮುಂದುವರಿಸಲು ಬೇಡಿಕೆ ಇಡುವ ಸಾಧ್ಯತೆ ಇದೆ. ರಿಜ್ವಾನ್ ಅರ್ಷದ್ ಮತ್ತು ಶ್ರೀನಿವಾಸ್ ಮಾನೆ ಸಚಿವ ಸ್ಥಾನ ಆಕಾಂಕ್ಷಿಗಳಾಗಿದ್ದಾರೆ. ಹೈಕಮಾಂಡ್ ಭೇಟಿ ಮಾಡಿ ತಮ್ಮನ್ನು ಸಂಪುಟ ಪುನರಚನೆಯಲ್ಲಿ ಪರಿಗಣಿಸುವಂತೆ ಮನವಿ ಮಾಡಿಕೊಳ್ಳುವ ಉದ್ದೇಶದಿಂದ ದೆಹಲಿಗೆ ತೆರಳಿದ್ದಾರೆ.
ಕಾಂಗ್ರೆಸ್ ಶಾಸಕರ ದೆಹಲಿ ಭೇಟಿ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಈ ನಡುವೆ ಮೇ 27ರಂದು ಕಾಂಗ್ರೆಸ್ ಶಾಸಕರ ಮತ್ತೊಂದು ತಂಡ ದೆಹಲಿಗೆ ತೆರಳಲು ಸಜ್ಜಾಗಿದೆ. ಈ ಬಗ್ಗೆ ಶಾಸಕ ಬೇಳೂರು ಗೋಪಾಲಕೃಷ್ಣ ಮಾಹಿತಿ ನೀಡಿದ್ದಾರೆ.
ನಾನೂ ಕೂಡ ಸಚಿವ ಸ್ಥಾನದ ಆಕಾಂಕ್ಷಿ. ಮೇ 27ರಂದು 35 ಶಾಸಕರು ದೆಹಲಿಗೆ ಹೋಗುತ್ತಿದ್ದೇವೆ. ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ನಮ್ಮ ಹಕ್ಕು ಮಂಡಿಸುತ್ತೇವೆ. ನಮಗೆ ಅವಕಾಶ ಮಾಡಿಕೊಡಿ ಎಂದು ಕೇಳುತ್ತೇವೆ. ಈ ಬಾರಿ ಕಳೆದ ಬಾರಿಗಿಂತ ಹೆಚ್ಚು ಶಾಸಕರು ದೆಹಲಿಗೆ ಹೋಗುತ್ತಿದ್ದೇವೆ. ಮೂರು ವರ್ಷ ಅವರು ಸಚಿವ ಸ್ಥಾನ ಅನುಭವಿಸಿದ್ದಾಯ್ತು. ಈಗ ಮನಗೆ ಅವಕಾಶ ಮಾಡಿಕೊಡಲಿ. ಅವರೇ ಮುಂದುವರೆಯಬೇಕು ಎಂಬ ನಿಯಮವೇನೂ ಇಲ್ಲ ಎಂದರು.
ಸಿಎಂ ಬದಲಾವಣೆ ವಿಚಾರವಾಗಿ ಮಾತನಾಡಿದ ಬೇಳೂರು ಗೋಪಾಲಕೃಷ್ಣ, ಸಿಎಂ ಬದಲಾವಣೆ ವಿಚಾರ ಹೈಕಮಾಂಡ್ ಗೆ ಬಿಟ್ಟದ್ದು, ಈ ಬಗ್ಗೆ ನೀವು ಅವರನ್ನೇ ಕೇಳಬೇಕು. ನಾವು ಸಚಿವ ಸ್ಥಾನದ ಆಕಾಂಕ್ಷಿಗಳು ಹಾಗಾಗಿ ಅದನ್ನು ಮಾತ್ರ ಮಾತನಾಡುತ್ತೇವೆ. ಸಿಎಂ ಬದಲಾವಣೆ ವಿಚಾರವಾಗಿ ನಾವೇನೂ ಹೇಳುವುದಿಲ್ಲ. ಆದರೆ ನಮಗೆ ಸಚಿವ ಸ್ಥಾನ ನೀಡದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ನಡೆ ಅನುಸರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.