ಬೆಂಗಳೂರು: ಆಶ್ವೇಜ ಶುದ್ಧ ಪಾಡ್ಯಮಿ ನಿಮಿತ್ತ ಮೈಸೂರು ಸೇರಿದಂತೆ ರಾಜ್ಯದ ಪ್ರಮುಖ ಶಕ್ತಿ ಕೇಂದ್ರಗಳಲ್ಲಿ ಭಾನುವಾರದಿಂದ ಶರನ್ನವರಾತ್ರಿ ಉತ್ಸವಕ್ಕೆ ವಿಧ್ಯುಕ್ತ ಚಾಲನೆ ಸಿಗಲಿದೆ. ಐತಿಹಾಸಿಕ ಮಂಗಳೂರು ದಸರಾಕ್ಕೆ ಕುದ್ರೋಳಿಯ ಗೋಕರ್ಣನಾಥ ಕ್ಷೇತ್ರದಲ್ಲಿ ಹಾಗೂ ಮಡಿಕೇರಿ ದಸರಾ ಕರಗ ಉತ್ಸವಕ್ಕೂ ಭಾನುವಾರವೇ ಚಾಲನೆ ಸಿಗಲಿದೆ. ಇನ್ನು ಉಡುಪಿಯ ಪ್ರಸಿದ್ಧ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ಹಾಗೂ ಶೃಂಗೇರಿಯ ದಕ್ಷಿಣಾಮ್ನಾಯ ಶಾರದಾ ಪೀಠದಲ್ಲೂ ಶನಿವಾರವೇ ಶರನ್ನವರಾತ್ರಿ ಉತ್ಸವ ವಿದ್ಯುಕ್ತವಾಗಿ ಆರಂಭಗೊಂಡಿತು.
ಮೈಸೂರು ದಸರಾ ಮಾದರಿಯಲ್ಲೇ ಕಳೆದ ಎರಡು ವರ್ಷಗಳಿಂದ ತುಮಕೂರಿನಲ್ಲೂ ದಸರಾ ಮಹೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿದ್ದು, ಭಾನುವಾರದಿಂದ ಈ ಸಂಭ್ರಮ ಕಳೆಗಟ್ಟಿದೆ. ಇದರೊಂದಿಗೆ ಬೆಳಗಾವಿಯ ಐತಿಹಾಸಿಕ ದುರ್ಗಾಮಾತಾ ದೌಡ್, ಸವದತ್ತಿ ಯಲ್ಲಮ್ಮ ದೇವಸ್ಥಾನ, ಗೋಕರ್ಣದ ಮಹಾಬಲೇಶ್ವರ ಹಾಗೂ ತುಮಕೂರು ಜಿಲ್ಲೆಯ ಗೊರವನಹಳ್ಳಿಯ ಮಹಾಲಕ್ಷ್ಮಿ ದೇವಸ್ಥಾನ ಸೇರಿದಂತೆ ರಾಜ್ಯದ ಮೂಲೆಮೂಲೆಗಳಲ್ಲಿರುವ ದೇವಸ್ಥಾನಗಳು ಮತ್ತು ಶಕ್ತಿ ಕೇಂದ್ರಗಳಲ್ಲಿ ದೇವಿಗೆ ವಿಶೇಷ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಿವೆ.
ನವರಾತ್ರಿ ಹಬ್ಬದ ಈ ಒಂಬತ್ತು ದಿನಗಳ ಕಾಲ ರಾಜ್ಯದಾದ್ಯಂತ ದೇವಾಲಯಗಳಲ್ಲಿ ವಿಶೇಷ ಅಲಂಕಾರ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಧಾರ್ಮಿಕ ಅನುಷ್ಠಾನಗಳು ನಡೆಯಲಿದ್ದು, ಭಕ್ತಸಾಗರವೇ ಹರಿದುಬರಲಿದೆ. ಈ ಹಿನ್ನೆಲೆಯಲ್ಲಿ ಪ್ರಮುಖ ದೇವಸ್ಥಾನಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮತ್ತು ಸಾರ್ವಜನಿಕರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.