ನವದೆಹಲಿ: ಚಾಲಕನ ನಿಯಂತ್ರಣ ತಪ್ಪಿದ ಬಸ್ ಪಲ್ಟಿಯಾಗಿ ಬಿದ್ದ ಪರಿಣಾಮ 6 ಪ್ರಯಾಣಿಕರು ಸಾವನ್ನಪ್ಪಿರುವ ಘಟನೆ ಆಗ್ರಾ- ಲಕ್ನೌ ಎಕ್ಸ್ ಪ್ರೆಸ್ ವೇಯಲ್ಲಿ ಸಂಭವಿಸಿದೆ.
ದೆಹಲಿಯಿಂದ ಬಿಹಾರಕ್ಕೆ ಹೋಗುತ್ತಿದ್ದ ಬಸ್ ಆಗ್ರಾ-ಲಕ್ನೋ ಎಕ್ಸ್ಪ್ರೆಸ್ವೇನಲ್ಲಿ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಪರಿಣಾಮ 6 ಜನರು ಮೃತಪಟ್ಟಿದ್ದು, 10ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಔರಾಸ್ ಪೊಲೀಸ್ ಠಾಣೆ ಪ್ರದೇಶದ ಆಗ್ರಾ ಲಕ್ನೋ ಎಕ್ಸ್ಪ್ರೆಸ್ವೇಯಲ್ಲಿ ಈ ಅಪಘಾತ ಸಂಭವಿಸಿದೆ. ಗಂಭೀರವಾಗಿ ಗಾಯಗೊಂಡ ಪ್ರಯಾಣಿಕರನ್ನು ಚಿಕಿತ್ಸೆಗಾಗಿ ಲಕ್ನೋದ ಟ್ರಾಮಾ ಸೆಂಟರ್‌ಗೆ ಕರೆದೊಯ್ಯಲಾಗಿದೆ.
ಔರಾಸ್ ಎಸ್‌ಒ ಸಂಜೀವ್ ಕುಶ್ವಾಹ ನೀಡಿರುವ ಮಾಹಿತಿ ಪ್ರಕಾರ ಅಪಘಾತದಲ್ಲಿ ಸಾವನ್ನಪ್ಪಿದವರಲ್ಲಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಸಬ್ ಇನ್ಸ್‌ಪೆಕ್ಟರ್ ಮತ್ತು ಕೈದಿ ಕೂಡ ಸೇರಿದ್ದಾರೆ. ಮೃತ ಸಬ್ ಇನ್ಸ್‌ಪೆಕ್ಟರ್‌ನನ್ನು ರಾಮಚಂದ್ರ ಎಂದು ಗುರುತಿಸಲಾಗಿದೆ. ರಾಮಚಂದ್ರ ಅವರು ಕೈದಿ ಛತ್ರಪಾಲ್ ಜೊತೆಗೆ ಸಿವಾನ್‌ನಿಂದ ದೆಹಲಿಗೆ ಪ್ರಯಾಣಿಸಿ ಹಿಂತಿರುಗುತ್ತಿದ್ದಾಗ ಅಪಘಾತ ಸಂಭವಿಸಿದೆ.
ಮಾಹಿತಿ ತಿಳಿದ ಕೂಡಲೇ ಪೊಲೀಸರು ಮತ್ತು ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿ ಪರಿಹಾರ ಕಾರ್ಯಾಚರಣೆ ಆರಂಭಿಸಿದವು. ಸ್ಥಳದಲ್ಲಿ ಪೊಲೀಸರು ಬೀಡು ಬಿಟ್ಟಿದ್ದಾರೆ.