ನೋಯ್ಡಾ ಮತ್ತು ಗ್ರೇಟರ್ ನೋಯ್ಡಾದ ಹಲವು ಶಾಲೆಗಳಿಗೆ ಸೋಮವಾರ ಬೆಳಗಿನ ಜಾವ ಬಾಂಬ್ ಬೆದರಿಕೆ ಇಮೇಲ್ಗಳು ಬಂದಿದ್ದು, ಆತಂಕದ ವಾತಾವರಣ ನಿರ್ಮಾಣವಾದ ಹಿನ್ನೆಲೆಯಲ್ಲಿ ಪೊಲೀಸರು ವ್ಯಾಪಕ ಭದ್ರತಾ ಪರಿಶೀಲನೆ ನಡೆಸಿದ್ದಾರೆ.
ಶಾಲೆಗಳ ಆಡಳಿತ ಮಂಡಳಿಯು ತುರ್ತು ಸಹಾಯವಾಣಿಯ ಮೂಲಕ ಪೊಲೀಸರಿಗೆ ಮಾಹಿತಿ ನೀಡಿದ ತಕ್ಷಣವೇ ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳ, ಶ್ವಾನ ದಳ ಹಾಗೂ ವಿಧ್ವಂಸಕ ಕೃತ್ಯ ತಡೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ಕೈಗೊಂಡಿದ್ದಾರೆ. ಪ್ರಸ್ತುತ ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದ್ದು, ತಪಾಸಣೆಯ ವೇಳೆ ಯಾವುದೇ ಅನುಮಾನಾಸ್ಪದ ವಸ್ತುಗಳು ಕಂಡುಬಂದಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಅನಗತ್ಯ ಭೀತಿ ಮೂಡುವುದನ್ನು ತಡೆಯಲು ಪೊಲೀಸರು ಶಾಲಾ ಆವರಣದಲ್ಲಿ ಮಾಕ್ ಡ್ರಿಲ್ (ಮಾದರಿ ಕವಾಯತು) ನೆಪದಲ್ಲಿ ಪರಿಶೀಲನೆ ನಡೆಸಿದ್ದಾರೆ.
ಪರಿಶೀಲನೆಯ ನಂತರ ವಿದ್ಯಾರ್ಥಿಗಳಲ್ಲಿ ಗೊಂದಲ ಉಂಟಾಗದಂತೆ ತರಗತಿಗಳನ್ನು ಪುನರಾರಂಭಿಸಲಾಗಿದೆ. ಈ ಇಮೇಲ್ಗಳ ಮೂಲವನ್ನು ಪತ್ತೆಹಚ್ಚಲು ಪೊಲೀಸ್ ಸೈಬರ್ ಕ್ರೈಮ್ ತಂಡವು ತಾಂತ್ರಿಕ ತನಿಖೆಯನ್ನು ತೀವ್ರಗೊಳಿಸಿದ್ದು, ಸಾರ್ವಜನಿಕರು ಯಾವುದೇ ರೀತಿಯ ವದಂತಿಗಳಿಗೆ ಕಿವಿಗೊಡಬಾರದು ಎಂದು ಗೌತಮ ಬುದ್ಧ ನಗರ ಪೊಲೀಸರು ಮನವಿ ಮಾಡಿದ್ದಾರೆ.