ಬೆಂಗಳೂರು: ಆಹಾರ ಪೂರೈಕೆ ದೈತ್ಯ ಸಂಸ್ಥೆಯಾದ ಝೋಮ್ಯಾಟೊ, ಗ್ರಾಹಕರ ಆರೋಗ್ಯ ಮತ್ತು ಸುರಕ್ಷತೆಯ ಹಿತದೃಷ್ಟಿಯಿಂದ ಕಲಬೆರಕೆ ಹಾಗೂ ಕೃತಕ ಬಣ್ಣ ಬಳಸಿ ತಯಾರಿಸಿದ ಡೇರಿ (ಹಾಲಿನ) ಉತ್ಪನ್ನಗಳ ಮಾರಾಟಕ್ಕೆ ತಕ್ಷಣದಿಂದಲೇ ಜಾರಿಗೆ ಬರುವಂತೆ ಸಂಪೂರ್ಣ ನಿಷೇಧ ಹೇರಿದೆ. ತನ್ನೊಂದಿಗೆ ಒಪ್ಪಂದ ಮಾಡಿಕೊಂಡಿರುವ ಎಲ್ಲಾ ರೆಸ್ಟೋರೆಂಟ್‌ಗಳಿಗೆ ಈ ಬಗ್ಗೆ ಸ್ಪಷ್ಟ ನಿರ್ದೇಶನ ನೀಡಿದ್ದು, ಯಾವುದೇ ಕಾರಣಕ್ಕೂ ಕೃತಕ ಬಣ್ಣ ಅಥವಾ ಕಲಬೆರಕೆ ಇರುವ ಹಾಲಿನ ಉತ್ಪನ್ನಗಳು ಮತ್ತು ಖಾದ್ಯಗಳನ್ನು ಗ್ರಾಹಕರಿಗೆ ಸರಬರಾಜು ಮಾಡಬಾರದು ಎಂದು ಖಡಕ್ ಆದೇಶ ಹೊರಡಿಸಿದೆ.
ಒಂದೊಮ್ಮೆ ರೆಸ್ಟೋರೆಂಟ್‌ಗಳು ಮಾರಾಟ ಮಾಡುವ ಡೇರಿ ಉತ್ಪನ್ನಗಳಲ್ಲಿ ದೋಷಗಳು ಕಂಡುಬಂದರೆ ಅಥವಾ ಅವು ಕೃತಕ/ನಕಲಿ ಖಾದ್ಯಗಳೆಂದು ದೃಢಪಟ್ಟರೆ, ಅಂತಹ ಉತ್ಪನ್ನಗಳು ಮತ್ತು ಖಾದ್ಯಗಳ ಮಾರಾಟವನ್ನು ತಕ್ಷಣವೇ ನಿಷೇಧಿಸಲಾಗುವುದು ಎಂದು ಝೋಮ್ಯಾಟೊ ಸ್ಪಷ್ಟಪಡಿಸಿದೆ. ಈ ಹೊಸ ನಿಯಮದ ಬಗ್ಗೆ ಯಾವುದೇ ಗೊಂದಲಗಳಿಗೆ ಆಸ್ಪದವಿಲ್ಲದಂತೆ ಸಂಸ್ಥೆಯು ಅಧಿಕೃತ ಸ್ಪಷ್ಟನೆಯನ್ನೂ ನೀಡಿದ್ದು, ಗ್ರಾಹಕರಿಗೆ ಶುದ್ಧ ಹಾಗೂ ಗುಣಮಟ್ಟದ ಆಹಾರ ತಲುಪಿಸುವುದೇ ತಮ್ಮ ಮುಖ್ಯ ಆದ್ಯತೆ ಎಂದು ತಿಳಿಸಿದೆ.