ಬೆಂಗಳೂರು : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದ ರೈಲ್ವೆ ನಿಲ್ದಾಣದಲ್ಲಿ ಭೀಕರ ಅಪಘಾತವೊಂದು ಸಂಭವಿಸಿದ್ದು, ಚಲಿಸುವ ರೈಲು ಡಿಕ್ಕಿಯಾಗಿ ಅಜ್ಜಿ ಹಾಗೂ ಅವರ ಇಬ್ಬರು ಮೊಮ್ಮಕ್ಕಳು ಸ್ಥಳದಲ್ಲೇ ದುರಂತ ಅಂತ್ಯ ಕಂಡಿದ್ದಾರೆ. ಮೃತರನ್ನು ಇರ್ಫಾನಾ (46) ಹಾಗೂ ಅವರ ಮೊಮ್ಮಕ್ಕಳಾದ ರುಕಿಯಾ (13) ಮತ್ತು ರಾಕಿಯಾ (8) ಎಂದು ಗುರುತಿಸಲಾಗಿದೆ. ಶಾಲಾ ರಜೆ ಇದ್ದ ಕಾರಣ ಆಂಧ್ರಪ್ರದೇಶದ ಹಿಂದೂಪುರದಿಂದ ದೊಡ್ಡಬಳ್ಳಾಪುರದಲ್ಲಿದ್ದ ಅಜ್ಜಿಯ ಮನೆಗೆ ಮಕ್ಕಳು ಬಂದಿದ್ದರು. ರಜೆ ಮುಗಿಸಿಕೊಂಡು ಅಜ್ಜಿಯ ಜೊತೆ ಮರಳಿ ಊರಿಗೆ ತೆರಳಲು ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ್ದಾಗ ಈ ಘೋರ ದುರಂತ ಸಂಭವಿಸಿದೆ.
ರೈಲು ಹಳಿ ದಾಟುವಾಗ ಅನಿರೀಕ್ಷಿತವಾಗಿ ಬಂದ ರೈಲು ಡಿಕ್ಕ ಹೊಡೆದ ಪರಿಣಾಮ ಮೂವರೂ ತೀವ್ರವಾಗಿ ಗಾಯಗೊಂಡು ರೈಲು ಡಿಕ್ಕಿ ಹೊಡೆದ ರಭಸಕ್ಕೆ ಮೂವರ ದೇಹಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಸಂತಸದಿಂದ ರಜೆ ಕಳೆದು ಮನೆಗೆ ಮರಳಬೇಕಿದ್ದ ಚಿಕ್ಕ ಮಕ್ಕಳು ಅಜ್ಜಿಯೊಂದಿಗೆ ಹೆಣವಾಗಿ ಬಿದ್ದಿರುವುದನ್ನು ಕಂಡು ಸ್ಥಳೀಯರು ಕಣ್ಣೀರಿಟ್ಟಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಯಶವಂತಪುರ ರೈಲ್ವೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ತನಿಖೆ ಕೈಗೆತ್ತಿಕೊಂಡಿದ್ದಾರೆ.