ಬೆಂಗಳೂರು : ಬೆಂಗಳೂರು ಹೊರವಲಯದ ಅತ್ತಿಬೆಲೆ ಕೈಗಾರಿಕಾ ಪ್ರದೇಶದ ಲೇಖಾ ಕೆಮಿಕಲ್ಸ್ ಪ್ರೈವೇಟ್ ಲಿಮಿಟೆಡ್ ಕಾರ್ಖಾನೆಯಲ್ಲಿ ಸಂಭವಿಸಿದ ಭೀಕರ ಕೆಮಿಕಲ್ ಸಿಲಿಂಡರ್ ಸ್ಫೋಟದಲ್ಲಿ ಮೂವರು ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬೆಳಿಗ್ಗೆ ಏಕಾಏಕಿ ಸಂಭವಿಸಿದ ಈ ಅವಘಡದಲ್ಲಿ ಭಾರೀ ಗಾತ್ರದ ಸಿಲಿಂಡರ್ ಸಿಡಿದು ಬೆಂಕಿ ಹತ್ತಿಕೊಂಡಿದ್ದರಿಂದ, ಕೆಲಸ ಮಾಡುತ್ತಿದ್ದ ಕಾರ್ಮಿಕರಿಗೆ ಸುಟ್ಟ ಗಾಯಗಳಾಗಿವೆ. ಕೂಡಲೇ ಎಚ್ಚೆತ್ತ ಸಿಬ್ಬಂದಿ ಗಾಯಾಳುಗಳನ್ನು ರಕ್ಷಿಸಿದ್ದು, ಗಾಯಗೊಂಡ ಕಾರ್ಮಿಕರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ವಿಶೇಷವೆಂದರೆ, ಇದೇ ಕಾರ್ಖಾನೆಯಲ್ಲಿ ಈ ಮೊೆಯೂ ಸಹ ಇದೇ ರೀತಿಯ ಸಿಲಿಂಡರ್ ಸ್ಫೋಟ ಸಂಭವಿಸಿತ್ತು ಎಂಬ ಗಂಭೀರ ಆರೋಪ ಕೇಳಿಬಂದಿದೆ. ಸುರಕ್ಷತಾ ಮಾನದಂಡಗಳ ನಿರ್ಲಕ್ಷ್ಯದಿಂದಾಗಿ ಒಂದೇ ಕಾರ್ಖಾನೆಯಲ್ಲಿ ಎರಡನೇ ಬಾರಿಗೆ ಈ ರೀತಿಯ ದುರ್ಘಟನೆ ಮರುಕಳಿಸಿದ್ದು ಕಾರ್ಮಿಕರಲ್ಲಿ ಆತಂಕ ಮೂಡಿಸಿದೆ. ಘಟನಾ ಸ್ಥಳಕ್ಕೆ ಅತ್ತಿಬೆಲೆ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಮುಂದಿನ ತನಿಖೆ ಮುಂದುವರಿದಿದೆ.