ಬೆಂಗಳೂರು: ರಾಜ್ಯದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಬಿಟ್ ಕಾಯಿನ್ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ (PMLA) ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ (ED) ಬಂಧನಕ್ಕೊಳಗಾಗಿದ್ದ ಹ್ಯಾಕರ್ ಶ್ರೀಕೃಷ್ಣ ರಮೇಶ್ ಅಲಿಯಾಸ್ ಶ್ರೀಕಿ ಹಾಗೂ ಕ್ರಿಪ್ಟೊ ಟ್ರೇಡರ್ ರಾಬಿನ್ ಖಂಡೇಲವಾಲ್ ಅವರಿಗೆ ಕರ್ನಾಟಕ ಹೈಕೋರ್ಟ್ ಜಾಮೀನು ಮಂಜೂರು ಮಾಡಿ ಆದೇಶಿಸಿದೆ. ಮೇ 8ರಂದು ಬಂಧಿಸಲ್ಪಟ್ಟಿದ್ದ ಆರೋಪಿಗಳು ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅವರಿದ್ದ ಪೀಠವು ಈ ನಿರ್ಧಾರ ಕೈಗೊಂಡಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ಸುದೀರ್ಘ ವಾದ ಮಂಡಿಸಿ, "ಇ.ಡಿ ಅಧಿಕಾರಿಗಳು ನೀಡಿದ್ದ ಪ್ರತಿಯೊಂದು ಸಮನ್ಸ್ ಉಲ್ಲಂಘಿಸದೆ ಅರ್ಜಿದಾರರು ತನಿಖೆಗೆ ಪೂರ್ಣ ಸಹಕಾರ ನೀಡಿದ್ದಾರೆ. ಬಂಧನದ ವೇಳೆ ಅವರ ಬಳಿಯಿಂದ ಯಾವುದೇ ವಸ್ತು ಅಥವಾ ದಾಖಲೆಗಳನ್ನು ಜಪ್ತಿ ಮಾಡಲಾಗಿಲ್ಲ. ಜೊತೆಗೆ, ಇ.ಡಿ ಸಲ್ಲಿಸಿರುವ ದೂರಿನ ಭಾಗವಾಗಿ ಸಕ್ಷಮ ನ್ಯಾಯಾಲಯವು ಇನ್ನು ಪ್ರಕರಣವನ್ನು ಸಂಜ್ಞೆಗೆ ತೆಗೆದುಕೊಂಡಿಲ್ಲ. ಆದ್ದರಿಂದ ಅರ್ಜಿದಾರರಿಗೆ ಜಾಮೀನು ನೀಡಬೇಕು" ಎಂದು ನ್ಯಾಯಪೀಠವನ್ನು ಕೋರಿದರು.
ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಇ.ಡಿ ಪರ ವಕೀಲರು, "ಆರೋಪಿಗಳು ಹ್ಯಾಕಿಂಗ್ ಅನ್ನೇ ಉದ್ಯಮವನ್ನಾಗಿ ಮಾಡಿಕೊಂಡು ಕೋಟ್ಯಂತರ ರೂಪಾಯಿ ಅಕ್ರಮವಾಗಿ ಗಳಿಸಿದ್ದಾರೆ. ಈ ಹಣದಿಂದ ಐಷಾರಾಮಿ ಜೀವನ ಸಾಗಿಸುತ್ತಿದ್ದರು. ಪ್ರಮುಖ ಸಾಕ್ಷಿಗಳ ವಿಚಾರಣೆ ಪೂರ್ಣಗೊಳ್ಳುವವರೆಗೆ ಅವರಿಗೆ ಯಾವುದೇ ಕಾರಣಕ್ಕೂ ಜಾಮೀನು ಮಂಜೂರು ಮಾಡಬಾರದು" ಎಂದು ಪ್ರಬಲವಾಗಿ ಪ್ರತಿಪಾದಿಸಿದರು.
ಪ್ರಕರಣದ ಹಿನ್ನೆಲೆ: ಗೇಮಿಂಗ್ ವೇದಿಕೆಗಳು ಹಾಗೂ ಆನ್‌ಲೈನ್ ವಾಲೆಟ್‌ಗಳನ್ನು ಅಕ್ರಮವಾಗಿ ಹ್ಯಾಕ್ ಮಾಡಿ ಸಂಗ್ರಹಿಸಿದ ಹಣದಿಂದ ಕ್ರಿಪ್ಟೋ ಕರೆನ್ಸಿ ಖರೀದಿಸಿ ವರ್ಗಾವಣೆ ಮಾಡಲಾಗಿತ್ತು. ಈ ಹಣವನ್ನು ಡಾರ್ಕ್ ವೆಬ್ ಮೂಲಕ ಮಾದಕ ದ್ರವ್ಯಗಳನ್ನು ಖರೀದಿಸಲು ಮತ್ತು ಐಷಾರಾಮಿ ಜೀವನ ನಡೆಸಲು ಬಳಸಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ಈ ಪ್ರೆಡಿಕೇಟ್ ಅಪರಾಧದ ಆಧಾರದ ಮೇಲೆ ಪಿಎಂಎಲ್ ಕಾಯಿದೆಯಡಿ ಇ.ಡಿ ಸಂಸ್ಥೆಯು ಶ್ರೀಕಿ, ರಾಬಿನ್ ಖಂಡೇಲವಾಲ್, ಪ್ರತೀಕ್ ಹಾಗೂ ಸುನೀಶ್ ಹೆಗಡೆ ಸೇರಿದಂತೆ ಒಟ್ಟು ಆರು ಮಂದಿಯನ್ನು ಬಂಧಿಸಿ ಪ್ರಕರಣ ದಾಖಲಿಸಿತ್ತು.