ಬೆಂಗಳೂರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ನಡೆದ ಸಹಾಯಕ ಎಕ್ಸಿಕ್ಯೂಟಿವ್ ಎಂಜಿನಿಯರ್ (ಎಇಇ) ಗ್ರೇಡ್-1 ಹುದ್ದೆಗಳ ನೇಮಕಾತಿಯಲ್ಲಿ ಭಾರೀ ಅಕ್ರಮ ನಡೆದಿದ್ದು, ಇದರ ನೇರ ಹೊಣೆಯನ್ನು ಸಚಿವ ಪ್ರಿಯಾಂಕ್ ಖರ್ಗೆ ಹೊರಬೇಕು ಹಾಗೂ ಕೂಡಲೇ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ತೀವ್ರವಾಗಿ ಆಗ್ರಹಿಸಿದ್ದಾರೆ. ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ಮುಖಾಂತರ ನಡೆದ ಈ ಪರೀಕ್ಷೆಯಲ್ಲಿ ಗಂಭೀರ ಸ್ವರೂಪದ ಅಕ್ರಮಗಳು ಎಸಗಲ್ಪಟ್ಟಿವೆ ಎಂದು ಅವರು ದೂರಿದ್ದಾರೆ.
ಜೆಡಿಎಸ್ ರಾಜ್ಯ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಮಾರಸ್ವಾಮಿ, "ರಾಜ್ಯದಲ್ಲಿ ಪ್ರಿಯಾಂಕ್ ಕೃಪಾ ಪೋಷಿತ ಮಂಡಳಿ ನಡೆಯುತ್ತಿದ್ದು, ಇದು ಬೇಲಿಯೇ ಎದ್ದು ಹೊಲ ಮೇಯ್ದ ಪ್ರಕರಣವಾಗಿದೆ," ಎಂದು ವಾಗ್ದಾಳಿ ನಡೆಸಿದರು. ಈ ಇಡೀ ಹಗರಣವನ್ನು ಮುಚ್ಚಿ ಹಾಕಲು ಪ್ರಿಯಾಂಕ್ ಖರ್ಗೆ ಅವರೇ ಗೃಹ ಖಾತೆ ವಹಿಸಿಕೊಂಡವರಂತೆ ವರ್ತಿಸುತ್ತಿದ್ದಾರೆ ಎಂದ ಅವರು, ಕಾರ್ಬನ್ ಶೀಟ್ ಬಳಸಿ ಓಎಂಆರ್ ಶೀಟ್‌ಗಳನ್ನು ತಿದ್ದಿರುವ ಪ್ರಮುಖ ದಾಖಲೆಗಳು ಹಾಗೂ ತನಿಖಾ ವರದಿಗಳನ್ನು ಮಾಧ್ಯಮಗಳ ಮುಂದೆ ಬಿಡುಗಡೆ ಮಾಡಿದರು.
ಕೆಪಿಎಸ್ಸಿಯಲ್ಲಿ ಪಾರದರ್ಶಕತೆ ತರುವ ಮಾತುಗಳನ್ನಾಡುವ ಸಚಿವರ ನಡವಳಿಕೆಯನ್ನು ಪ್ರಶ್ನಿಸಿದ ಕೇಂದ್ರ ಸಚಿವರು, ಒಂದು ಕಡೆ ಅಧಿಕಾರ ಸಿಕ್ಕರೆ ಕೆಪಿಎಸ್ಸಿಯನ್ನೇ ರದ್ದು ಮಾಡುವುದಾಗಿ ವೀರಾವೇಶದ ಮಾತುಗಳನ್ನಾಡುವ ಖರ್ಗೆ, ಇನ್ನೊಂದೆಡೆ ಅಕ್ರಮದಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿರುವ ಅಂದಿನ ಕೆಪಿಎಸ್ಸಿ ಪರೀಕ್ಷಾ ನಿಯಂತ್ರಕ ಹಾಗೂ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಅವರನ್ನು ರಕ್ಷಿಸುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಹೇಳಿದ್ದರೂ, ರಾಜ್ಯ ಸರ್ಕಾರಕ್ಕೆ ಕನಿಷ್ಠ ಒಂದು ಎಫ್‌ಐಆರ್ (FIR) ದಾಖಲಿಸಲು ಸಹ ಸಾಧ್ಯವಾಗಿಲ್ಲ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು. ಪ್ರಿಯಾಂಕ್ ಖರ್ಗೆ ಅವರಿಗೆ ತಮ್ಮ ಮಾತಿನ ಮೇಲೆ ನಿಗಾ ಹಾಗೂ ಪಾರದರ್ಶಕತೆಯ ಮೇಲೆ ಗೌರವವಿದ್ದರೆ, ತಕ್ಷಣವೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ತನಿಖೆಗೆ ಸಹಕರಿಸಬೇಕು ಎಂದು ಅವರು ಒತ್ತಾಯಿಸಿದರು.