ಶಿವಮೊಗ್ಗ : ಮಾಜಿ ಉಪಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಕೆ.ಎಸ್. ಈಶ್ವರಪ್ಪ ಅವರಿಗೆ ಜೀವ ಬೆದರಿಕೆ ಕರೆಗಳು ಬಂದಿದ್ದು, ಈ ಸಂಬಂಧ ಅವರು ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ (ಎಸ್ಪಿ) ಅಧಿಕೃತವಾಗಿ ದೂರು ನೀಡಿದ್ದಾರೆ. ಅಕ್ಟೋಬರ್ 17ರ ರಾತ್ರಿ ಈಶ್ವರಪ್ಪ ಅವರ ಅಧಿಕೃತ ಮೊಬೈಲ್ ಸಂಖ್ಯೆಗೆ ಕರೆ ಮಾಡಿದ ದುಷ್ಕರ್ಮಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಿ, ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ದೂರಿನ ಪ್ರಕಾರ, ಅಕ್ಟೋಬರ್ 17ರ ರಾತ್ರಿ 8:49ಕ್ಕೆ 7019994981 ಸಂಖ್ಯೆಯಿಂದ ರಿಜ್ವಾನ್ ಬೇಗ್ ಎಂಬಾತ ಹಾಗೂ ರಾತ್ರಿ 10:49ಕ್ಕೆ 9823658527 ಸಂಖ್ಯೆಯಿಂದ ಫರಾನ್ ರಶೀದ್ ಎಂಬಾತ ಕರೆ ಮಾಡಿ ಬೆದರಿಕೆ ಹಾಕಿದ್ದು, 'ಟ್ರಾಯ್' (TRAI) ತಂತ್ರಾಂಶದ ಮೂಲಕ ಇವರ ಹೆಸರುಗಳು ಪತ್ತೆಯಾಗಿವೆ. ಈ ಘಟನೆಯಿಂದ ತಮಗೂ ಹಾಗೂ ತಮ್ಮ ಕುಟುಂಬದವರಿಗೂ ತೀವ್ರ ಆತಂಕ ಉಂಟಾಗಿದ್ದು, ಕೂಡಲೇ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಈಶ್ವರಪ್ಪ ಅವರು ಪೊಲೀಸರನ್ನು ಆಗ್ರಹಿಸಿದ್ದಾರೆ.