ಉತ್ತರ ಕನ್ನಡ : ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ಸೋಮವಾರ ಬೆಳ್ಳಂಬೆಳಿಗ್ಗೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಹುಬ್ಬಳ್ಳಿ ರೈಲ್ವೆ ಪೊಲೀಸರು ದಿಢೀರ್ ಬಂಧಿಸಿದ್ದಾರೆ. ಶಿರಸಿಯಲ್ಲಿ ಆಯೋಜಿಸಲಾಗಿದ್ದ ರೈತರ ವಿವಿಧ ಪ್ರತಿಭಟನಾ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಆಗಮಿಸಿದ್ದ ವೇಳೆ ಈ ಘಟನೆ ನಡೆದಿದೆ.
ಬಂಧನದ ಹಿನ್ನೆಲೆ ನೋಡುವುದಾದರೆ, 2013ರಲ್ಲಿ ನಡೆದ ಮಹದಾಯಿ ಹೋರಾಟಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ನ್ಯಾಯಾಲಯದಿಂದ ಹೊರಡಿಸಲಾಗಿದ್ದ ಜಾಮೀನು ರಹಿತ ವಾರಂಟ್ ಆಧಾರದ ಮೇಲೆ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ. ಬಂಧನದ ನಂತರ ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ಹೆಚ್ಚಿನ ಕಾನೂನು ಪ್ರಕ್ರಿಯೆಗಾಗಿ ಶಿರಸಿಯಿಂದ ಹುಬ್ಬಳ್ಳಿಗೆ ಕರೆದೊಯ್ಯಲಾಗಿದೆ.
ಸೋಮವಾರ ಬೆಳಗ್ಗೆ 10 ಗಂಟೆಗೆ ಶಿರಸಿಯ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ, ನಂತರ 11.30ಕ್ಕೆ ತಾಲೂಕಿನ ದಾಸನಕೊಪ್ಪದಲ್ಲಿ ರೈತರ ಬೃಹತ್ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಲು ರೈತ ಸಂಘ ಯೋಜನೆ ರೂಪಿಸಿತ್ತು. ಆದರೆ, ಕಾರ್ಯಕ್ರಮ ಆರಂಭಕ್ಕೂ ಮುನ್ನವೇ ರೈತ ನಾಯಕನ ಬಂಧನವಾಗಿರುವುದು ಸ್ಥಳೀಯ ಕಾರ್ಯಕರ್ತರಲ್ಲಿ ತೀವ್ರ ಅಸಮಾಧಾನ ಮತ್ತು ಚಕಮಕಿಗೆ ಕಾರಣವಾಗಿದೆ. ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ವಿವರಗಳು ಇನ್ನಷ್ಟೇ ಲಭ್ಯವಾಗಬೇಕಿದೆ.