ದಾವಣಗೆರೆ: ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಧರ್ಮಾಧಿಕಾರಿ ವಚನಾನಂದ ಸ್ವಾಮೀಜಿಯವರಿಗೆ ನೀಡಲಾಗಿದ್ದ ಜಾಮೀನು ರದ್ದತಿಗೆ ಕೋರಿ ಸಲ್ಲಿಕೆಯಾಗಿದ್ದ ತಕರಾರು ಅರ್ಜಿಯನ್ನು ದಾವಣಗೆರೆಯ ವಿಶೇಷ ಪೋಕ್ಸೋ ನ್ಯಾಯಾಲಯ ವಜಾಗೊಳಿಸಿದೆ. ಈ ಮೂಲಕ ಶ್ರೀಗಳಿಗೆ ನ್ಯಾಯಾಂಗ ಪ್ರಕ್ರಿಯೆಯಲ್ಲಿ ಸದ್ಯಕ್ಕೆ ದೊಡ್ಡ ರಿಲೀಫ್ ಸಿಕ್ಕಂತಾಗಿದೆ.
ಪ್ರಕರಣದ ಹಿನ್ನೆಲೆ
ಮಠದಲ್ಲಿದ್ದ ಅಪ್ರಾಪ್ತ ಬಾಲಕರಿಗೆ ಲೈಂಗಿಕ ಕಿರುಕುಳ ನೀಡಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಹರಿಹರ ನಗರ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ನ್ಯಾಯಾಲಯದ ಮೊರೆ ಹೋಗಿದ್ದ ವಚನಾನಂದ ಶ್ರೀಗಳಿಗೆ ಕಳೆದ ಜುಲೈ ತಿಂಗಳಲ್ಲಿ ಷರತ್ತುಬದ್ಧ ನಿಯಮಿತ ಜಾಮೀನು ಮಂಜೂರಾಗಿತ್ತು.
ಜಾಮೀನು ರದ್ದತಿಗೆ ಸಂತ್ರಸ್ತನ ತಾಯಿ ಅರ್ಜಿ
ಆದರೆ, ಸ್ವಾಮೀಜಿಯವರು ತಮ್ಮ ಪ್ರಭಾವ ಬಳಸಿ ಪ್ರಕರಣದ ಸಾಕ್ಷಿಗಳಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದ ಸಂತ್ರಸ್ತ ಬಾಲಕನ ತಾಯಿ, ಅವರ ಜಾಮೀನು ಆದೇಶವನ್ನು ಹಿಂಪಡೆಯಬೇಕೆಂದು ನ್ಯಾಯಪೀಠಕ್ಕೆ ಮರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ಪೋಕ್ಸೋ ನ್ಯಾಯಾಲಯ, ಹಿರಿಯ ವಕೀಲ ಎಸ್.ವಿ. ಪಾಟೀಲ್ ಅವರ ವಾದ-ಪ್ರತಿವಾದಗಳನ್ನು ಆಲಿಸಿದ ಬಳಿಕ, ಅರ್ಜಿದಾರರ ಮನವಿಯನ್ನು ತಿರಸ್ಕರಿಸಿ ಆದೇಶ ಹೊರಡಿಸಿತು.
ಸತ್ಯಕ್ಕೆ ಗೆಲುವು ನಿಶ್ಚಿತ ಎಂದಿದ್ದ ಶ್ರೀಗಳು
ಈ ಹಿಂದೆ ಜಾಮೀನಿನ ನಿಯಮಗಳನ್ನು ಪಾಲಿಸಿ ಕಾನೂನು ಪ್ರಕ್ರಿಯೆಗೆ ಸಂಪೂರ್ಣ ಸಹಕಾರ ನೀಡಿದ್ದ ವಚನಾನಂದ ಸ್ವಾಮೀಜಿಯವರು, ಕಾನೂನಿನ ಮೇಲೆ ತಮಗೆ ಅಪಾರ ಗೌರವವಿದೆ ಎಂದು ತಿಳಿಸಿದ್ದರು. ಸನ್ಯಾಸ ಜೀವನದ ಹಾದಿಯಲ್ಲಿ ಇಂತಹ ಅಪವಾದಗಳು, ನಿಂದನೆಗಳು ಹಾಗೂ ಕಠಿಣ ಪರೀಕ್ಷೆಗಳು ಎದುರಾಗುವುದು ಸಾಮಾನ್ಯವಾಗಿದ್ದು, ಅಂತಿಮವಾಗಿ ಸತ್ಯ ಮತ್ತು ಧರ್ಮಕ್ಕೇ ಜಯ ಸಿಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದರು.