ಬೆಂಗಳೂರು : ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ವಿರುದ್ಧ ನಕಲಿ ಹಾಗೂ ದುರುದ್ದೇಶಪೂರಿತ ವಿಡಿಯೋಗಳನ್ನು ಹಂಚಿಕೊಂಡು ತೇಜೋವಧೆ ಮಾಡಲಾಗುತ್ತಿದೆ ಎಂದು ಆರೋಪಿಸಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿದ ದೂರಿನ ಮೇರೆಗೆ ಬೆಂಗಳೂರು ಸಿಸಿಬಿ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಅಧಿಕೃತವಾಗಿ ಪ್ರಕರಣ ದಾಖಲಾಗಿದೆ. ಈ ರಾಜಕೀಯ ದುರುದ್ದೇಶದ ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿರುವ ನಗರ ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಅವರ ಕಟ್ಟುನಿಟ್ಟಿನ ಸೂಚನೆಯಂತೆ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದು, ಈಗಾಗಲೇ ಇಬ್ಬರು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಿದ್ದಾರೆ.
ತಮ್ಮ ತೇಜೋವಧೆ ಮಾಡುವ ದುರುದ್ದೇಶದಿಂದಲೇ ವ್ಯವಸ್ಥಿತ ರಾಜಕೀಯ ಷಡ್ಯಂತ್ರ ರೂಪಿಸಿ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ ಎಂದು ಸಿದ್ದರಾಮಯ್ಯ ಅವರು ಖುದ್ದು ಕಮಿಷನರ್ ಅವರಿಗೆ ದೂರು ಸಲ್ಲಿಸಿದ್ದರು. ಈ ವೇಳೆ, ತಪ್ಪು ಮಾಹಿತಿ ಹರಡುತ್ತಿದ್ದ ನಿರ್ದಿಷ್ಟ ಸಾಮಾಜಿಕ ಜಾಲತಾಣ ಖಾತೆಗಳ ಐಡಿ (ID) ವಿವರಗಳನ್ನೂ ಸಹ ಅವರು ಒದಗಿಸಿದ್ದರು. ದೂರು ದಾಖಲಾದ ತಕ್ಷಣ ಎಚ್ಚೆತ್ತ ಸೈಬರ್ ಕ್ರೈಮ್ ಪೊಲೀಸರು ಜಾಲತಾಣಗಳ ಮೇಲೆ ತೀವ್ರ ನಿಗಾ ಇರಿಸಿ, ವಿಡಿಯೋ ಪ್ರಸಾರ ಮಾಡಿದ ಪ್ರಮುಖ ಖಾತೆಗಳ ಐಪಿ (IP) ವಿಳಾಸಗಳ ಆಧಾರದ ಮೇಲೆ ಡಿವೈಸ್ ಮಾಲೀಕರ ಜಾಡು ಹಿಡಿದು ತನಿಖೆ ನಡೆಸಿದ್ದಾರೆ.
ಈ ಕಾರ್ಯಾಚರಣೆಯ ಭಾಗವಾಗಿ ಸದ್ಯ ಇಬ್ಬರು ಅನುಮಾನಾಸ್ಪದ ವ್ಯಕ್ತಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು, ಅವರನ್ನು ಅಜ್ಞಾತ ಸ್ಥಳದಲ್ಲಿ ಇರಿಸಿ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಈ ಕೃತ್ಯದ ಹಿಂದೆ ಯಾರ ಕೈವಾಡವಿದೆ, ಈ ನಕಲಿ ವಿಡಿಯೋಗಳು ಎಲ್ಲಿಂದ ಮತ್ತು ಯಾರ ನಿರ್ದೇಶನದ ಮೇರೆಗೆ ಸೃಷ್ಟಿಯಾಗಿವೆ ಎಂಬಿತ್ಯಾದಿ ಪ್ರಮುಖ ಮಾಹಿತ ಕಲೆಹಾಕಲು ಸಿಸಿಬಿ ಅಧಿಕಾರಿಗಳು ಮುಂದಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ವ್ಯಕ್ತಿಗಳು ಬಂಧನಕ್ಕೊಳಗಾಗುವ ಸಾಧ್ಯತೆಯಿದೆ.