ಬೆಂಗಳೂರು: ಕನ್ನಡ ಬಿಗ್ಬಾಸ್ ರಿಯಾಲಿಟಿ ಶೋನಲ್ಲಿ ದಿನದಿಂದ ದಿನಕ್ಕೆ ಆಟದ ಕಾವು ಏರುತ್ತಿದ್ದು, ಇದರ ನಡುವೆಯೇ ಸ್ಪರ್ಧಿಯೊಬ್ಬರ ಆರೋಗ್ಯದಲ್ಲಿ ಏರುಪೇರಾಗಿರುವ ಆತಂಕಕಾರಿ ಘಟನೆ ನಡೆದಿದೆ. 'ರಾಕ್ಷಸರು ವರ್ಸಸ್ ಗಂಧರ್ವರು' ಎಂಬ ಕಠಿಣ ಟಾಸ್ಕ್ ನಡೆಯುತ್ತಿದ್ದ ವೇಳೆ ನಟಿ ಸಂಗೀತಾ ಭಟ್ ದಿಢೀರನೆ ಅಸ್ವಸ್ಥಗೊಂಡು ನೆಲಕ್ಕೆ ಕುಸಿದು ಬಿದ್ದಿದ್ದಾರೆ. ಸದ್ಯ ಬಿಗ್ಬಾಸ್ ವೈದ್ಯಕೀಯ ತಂಡವು ಅವರಿಗೆ ತಕ್ಷಣದ ಚಿಕಿತ್ಸೆ ನೀಡುತ್ತಿದ್ದು, ಆರೋಗ್ಯ ಸ್ಥಿತಿಯನ್ನು ಹತ್ತಿರದಿಂದ ನಿಗದಿಪಡಿಸುತ್ತಿದೆ ಎನ್ನಲಾಗಿದೆ.
ಈ ಘಟನೆ ಕುರಿತು ಬಿಗ್ಬಾಸ್ ಆಯೋಜಕರು ಅಥವಾ ವಾಹಿನಿಯಿಂದ ಯಾವುದೇ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ. ಆದರೆ, 24 ಗಂಟೆ ಲೈವ್ ಸ್ಟ್ರೀಮಿಂಗ್ ಲಭ್ಯವಿರುವ 'ಜಿಯೋ ಹಾಟ್ಸ್ಟಾರ್'ನಲ್ಲಿ ಇದನ್ನು ವೀಕ್ಷಿಸಿದ ಅಭಿಮಾನಿಗಳು ವೀಡಿಯೊ ಕ್ಲಿಪ್ಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸಂಗೀತಾ ಭಟ್ ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಅಭಿಮಾನಿಗಳು ಹಾಗೂ ವೀಕ್ಷಕರು ಸಾಮಾಜಿಕ ಜಾಲತಾಣಗಳಲ್ಲಿ ಹಾರೈಸುತ್ತಿದ್ದಾರೆ.
ಇನ್ಸ್ಟಾಗ್ರಾಮ್ ಸೇರಿದಂತೆ ವಿವಿದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವೀಡಿಯೊದಲ್ಲಿ, ಸಂಗೀತಾ ಅವರು ಅಸ್ವಸ್ಥರಾಗಿ ನೆಲದ ಮೇಲೆ ಬಿದ್ದಿರುವುದು ಕಾಣಿಸುತ್ತದೆ. ತಕ್ಷಣವೇ ಕಾರ್ಯಪ್ರವೃತ್ತರಾದ ಸಹ ಸ್ಪರ್ಧಿಗಳಾದ ಸೌಂದರ್ಯ ಮತ್ತು ಕಾವ್ಯಾ ಅವರು ಇನ್ಹೇಲರ್ (Inhaler) ಹುಡುಕಲು ತಡಕಾಡಿದ್ದಾರೆ. ಆದರೆ ಸಮಯಕ್ಕೆ ಸರಿಯಾಗಿ ಇನ್ಹೇಲರ್ ಸಿಗದ ಕಾರಣ, ಪರಿಸ್ಥಿತಿ ಗಂಭೀರವಾಗುವುದನ್ನು ಅರಿತ ತಾಂಡವ್ ರಾಮ್ ಅವರು ತಕ್ಷಣವೇ ಸಂಗೀತಾರನ್ನು ಎತ್ತಿಕೊಂಡು ಕನ್ಫೆಷನ್ ರೂಮ್ಗೆ ಕರೆದೊಯ್ದಿದ್ದಾರೆ. ಈ ವೇಳೆ ಮನೆಯಲ್ಲಿದ್ದ ಇತರ ಸ್ಪರ್ಧಿಗಳು తీవ్ర ಆತಂಕಗೊಂಡಿದ್ದರು.
ಇತ್ತೀಚೆಗಷ್ಟೇ ನಿರ್ದೇಶಕ ಓಂ ಪ್ರಕಾಶ್ ರಾವ್ ಅವರು ಅನಾರೋಗ್ಯದ ಕಾರಣದಿಂದ ಬಿಗ್ಬಾಸ್ ಪಯಣವನ್ನು ಅರ್ಧಕ್ಕೇ ಮುಗಿಸಿ ಹೊರಬಂದಿದ್ದರು. ಈಗ ಸಂಗೀತಾ ಅವರೂ ಕೂಡ ಅದೇ ಹಾದಿ ತುಳಿಯಲಿದ್ದಾರೆಯೇ ಎಂಬ ಅನುಮಾನ ವೀಕ್ಷಕರಲ್ಲಿ ಮೂಡಿದೆ. ಚಿಕಿತ್ಸೆಯ ನಂತರ ಸಂಗೀತಾ ಭಟ್ ಚೇತರಿಸಿಕೊಂಡು ಮತ್ತೆ ಆಟಕ್ಕೆ ಮರಳುತ್ತಾರಾ ಅಥವಾ ವೈದ್ಯರ ಸಲಹೆಯಂತೆ ಬಿಗ್ಬಾಸ್ ಮನೆಯಿಂದ ಹೊರನಡೆಯುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
'ರಾಕ್ಷಸರು Vs ಗಂಧರ್ವರು' ಟಾಸ್ಕ್ನಿಂದಾಗಿ ಮನೆಯ ವಾತಾವರಣ ಸಂಪೂರ್ಣ ಬಿಸಿಯೇರಿದೆ. ರಾಕ್ಷಸರ ತಂಡದಲ್ಲಿ ಮಂಜು, ಗಗನ್, ಸಂಗೀತಾ, ಜಗ್ಗಿ, ಪ್ರಶಾಂತ್ ಮತ್ತು ಸೌಂದರ್ಯ ಇದ್ದರೆ, ಗಂಧರ್ವರ ತಂಡದಲ್ಲಿ ಧನುಷ್, ತಾಂಡವ್, ಯಶಸ್, ಕಾವ್ಯಾ, ಕಿರಣ್, ಸೋನಿಕಾ ಹಾಗೂ ಗಾನವಿ ಸ್ಪರ್ಧಿಸುತ್ತಿದ್ದಾರೆ. ಕಳೆದ ವಾರ ಎಲಿಮಿನೇಷನ್ ತೂಗುಕತ್ತಿಯಲ್ಲಿದ್ದ ಸಂಗೀತಾ ಬಾಟಮ್-3 ಹಂತ ತಲುಪಿ ಸೇಫ್ ಆಗಿದ್ದರು. ಆ ವೇಳೆಯೂ "ನನ್ನನ್ನು ಮನೆಗೆ ಕಳುಹಿಸಿದ್ದರೆ ಚೆನ್ನಾಗಿತ್ತು, ಇಲ್ಲಿ ನೋವು ತಡೆಯಲಾಗುತ್ತಿಲ್ಲ" ಎಂದು ಕಣ್ಣೀರಿಟ್ಟಿದ್ದರು. ಮೊದಲೇ ಅಸ್ವಸ್ಥರಾಗಿದ್ದ ಅವರನ್ನು ಬಿಗ್ಬಾಸ್ ಮನೆಯಲ್ಲಿ ಮುಂದುವರಿಸಬಾರದಿತ್ತು ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.