ಮೈಸೂರು : ಮೈಸೂರು ದಸರಾ ಮಹೋತ್ಸವದ ಸಂಭ್ರಮಕ್ಕೆ ಈ ಬಾರಿ ಕರಾವಳಿಯ ಸಾಂಪ್ರದಾಯಿಕ ಕಂಬಳದ ಮೆರುಗು ಸಿಕ್ಕಿದೆ. ಮೈಸೂರಿನ ಸಾತಗಳ್ಳಿಯ ವಿ.ಟಿ.ಯು ಕಾಲೇಜು ಸಮೀಪದ ಸುಮಾರು 20 ಎಕರೆ ವಿಶಾಲ ಪ್ರದೇಶದಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ದಸರಾ ಕಂಬಳಕ್ಕೆ ಇಂದು ಅದ್ಧೂರಿಯಾಗಿ ಚಾಲನೆ ನೀಡಲಾಗಿದೆ. ಪುತ್ತೂರು ಶಾಸಕ ಅಶೋಕ್ ರೈ ಅವರು ಕಂಬಳ ಕರೆಗೆ ವಿಧಿವಿಧಾನಗಳ ಮೂಲಕ ಪೂಜೆ ಸಲ್ಲಿಸಿ ಈ ರೋಚಕ ಕ್ರೀಡೆಗೆ ಚಾಲನೆ ನೀಡಿದ್ದು, ನಾಡಿನಾದ್ಯಂತ ಆಗಮಿಸಿರುವ ಕ್ರೀಡಾಭಿಮಾನಿಗಳಲ್ಲಿ ಹೊಸ ಉತ್ಸಾಹ ಮೂಡಿಸಿದೆ.
ಈ ವಿಶೇಷ ಕಂಬಳಕ್ಕಾಗಿ 147 ಮೀಟರ್ ಉದ್ದದ ಎರಡು ಸಮಾನಾಂತರ ಟ್ರ್ಯಾಕ್ಗಳನ್ನು ಅತ್ಯಾಕರ್ಷಕವಾಗಿ ನಿರ್ಮಿಸಲಾಗಿದೆ. ಕೋಣಗಳ ವಿರಮಿಸಲು, ಆರೋಗ್ಯ ರಕ್ಷಣೆಗಾಗಿ ಮತ್ತು ವೀಕ್ಷಕರ ವೀಕ್ಷಣೆಗೆ ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಸಂಜೆ 6 ಗಂಟೆಯಿಂದ ಕೋಣಗಳ ಓಟದ ರೋಚಕ ಸ್ಪರ್ಧೆಗಳು ಆರಂಭವಾಗಲಿದ್ದು, ಕೋಣಗಳ ಅಪ್ಪಟ ವೇಗ ಹಾಗೂ ಜಾಕಿಗಳ ಕೌಶಲ್ಯದ ಪ್ರದರ್ಶನ ಕರಾವಳಿಯ ಸಂಸ್ಕೃತಿಯನ್ನು ಮೈಸೂರಿನಲ್ಲಿ ಮರುಕಳಿಸುವಂತೆ ಮಾಡಿದೆ.
ನಾಳೆ (ಸೋಮವಾರ) ಸಂಜೆ 7 ಗಂಟೆಗೆ ಸಮಾರೋಪ ಸಮಾರಂಭ ಹಾಗೂ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಲಿದೆ. ಈ ಸಮಾರಂಭದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ, ವಿಜೇತ ಸ್ಪರ್ಧಿಗಳಿಗೆ ಬಹುಮಾನ ವಿತರಿಸಲಿದ್ದಾರೆ. ಕರಾವಳಿಯ ಸಾಂಪ್ರದಾಯಿಕ ಕ್ರೀಡೆಯನ್ನು ನಾಡಹಬ್ಬ ದಸರಾದಲ್ಲಿ ವೀಕ್ಷಿಸಲು ಮೈಸೂರು ಹಾಗೂ ಸುತ್ತಮುತ್ತಲಿನ ಸಾವಿರಾರು ಸಾರ್ವಜನಿಕರು ಉತ್ಸುಕರಾಗಿ ಆಗಮಿಸುತ್ತಿದ್ದಾರೆ.