ಬೆಂಗಳೂರು: ನಗರದ ಯಲಹಂಕ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಭೀಕರ ದುರಂತವೊಂದು ಸಂಭವಿಸಿದ್ದು, ಎಲೆಕ್ಟ್ರಿಕ್ ಜಂಕ್ಷನ್ ಬಾಕ್ಸ್ ಸ್ಫೋಟಗೊಂಡು ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬಾಗಲೂರು ಕ್ರಾಸ್ ಬಳಿ ಇರುವ ಅಮೆಜಾನ್ ಕಚೇರಿಯ ಗೇಟ್ ನಂಬರ್ 3ರ ಬಳಿ ಈ ಘಟನೆ ನಡೆದಿದೆ. ಇದ್ದಕ್ಕಿದ್ದಂತೆ ಜಂಕ್ಷನ್ ಬಾಕ್ಸ್ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ಭಾರೀ ಶಬ್ದದೊಂದಿಗೆ ಸ್ಫೋಟಗೊಂಡಿದ್ದರಿಂದ, ಹತ್ತಿರದಲ್ಲಿದ್ದ ಸಾರ್ವಜನಿಕರು ತೀವ್ರ ಆತಂಕಕ್ಕೊಳಗಾದರು.
ಸ್ಫೋಟದ ತೀವ್ರತೆಗೆ ಸ್ಥಳದಲ್ಲಿದ್ದ ಒಬ್ಬ ವ್ಯಕ್ತಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದರೆ, ಮತ್ತೊಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಘಟನೆ ನಡೆದ ತಕ್ಷಣವೇ ಗಾಯಾಳುಗಳನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಿಗೆ ಅಗತ್ಯ ಚಿಕಿತ್ಸೆ ನೀಡಲಾಗುತ್ತಿದೆ. ಸುದ್ದಿ ತಿಳಿದ ತಕ್ಷಣವೇ ಯಲಹಂಕ ಉಪನಗರ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸ್ಫೋಟಕ್ಕೆ ನಿಖರ ಕಾರಣವೇನು ಎಂಬುದರ ಕುರಿತು ತನಿಖೆ ಮುಂದುವರಿಸಿದ್ದಾರೆ.