ನವದೆಹಲಿ: ಭಾರೀ ವಿವಾದ ಹಾಗೂ ವಿರೋಧಕ್ಕೆ ಕಾರಣವಾಗಿರುವ ಯುಪಿಐ (UPI) ಪಾವತಿ ಮೇಲಿನ ಶೇ. 0.4ರಷ್ಟು ಶುಲ್ಕ ಜಾರಿಗೊಳಿಸುವ ದಿನಾಂಕವನ್ನು ಅಕ್ಟೋಬರ್ 15ರ ಬದಲು ದೀಪಾವಳಿ ಹಬ್ಬದ ಬಳಿಕಕ್ಕೆ ಮುಂದೂಡಲು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ನಿರ್ಧರಿಸಿದೆ. ಹಬ್ಬದ ಸೀಸನ್ನಲ್ಲಿ ವರ್ತಕರಿಗೆ ಮತ್ತು ಗ್ರಾಹಕರಿಗೆ ಉಂಟಾಗಬಹುದಾದ ಆರ್ಥಿಕ ಹೊರೆ ಹಾಗೂ ಅಡಚಣೆಯನ್ನು ತಪ್ಪಿಸಲು ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.
ಹಿಂದಿನ ನಿರ್ಧಾರದನ್ವಯ, ಯುಪಿಐ ಮೂಲಕ ಮಾಡಲಾಗುವ 2,000 ರೂ. ಮೇಲ್ಪಟ್ಟ ಪಾವತಿಗಳಿಗೆ ಕನಿಷ್ಠ ಶೇ. 0.4ರಷ್ಟು ಹಾಗೂ 75,000 ರೂ. ಮೇಲ್ಪಟ್ಟ ಮೊತ್ತದ ವಹಿವಾಟಿಗೆ 300 ರೂ. ವರೆಗೆ ಶುಲ್ಕ ವಿಧಿಸಲು ತೀರ್ಮಾನಿಸಲಾಗಿತ್ತು. ಆದರೆ ಹಬ್ಬದ ಋತುವಿನಲ್ಲಿ ಈ ಶುಲ್ಕ ಜಾರಿಗೆ ತಂದರೆ ವ್ಯಾಪಾರ ವಹಿವಾಟಿಗೆ ತೊಂದರೆಯಾಗಲಿದೆ ಎಂದು ವರ್ತಕರು ಮತ್ತು ವ್ಯಾಪಾರಿ ಸಂಘಟನೆಗಳು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದವು. ಅಲ್ಲದೆ, ವಿರೋಧ ಪಕ್ಷಗಳು ಕೂಡ ಈ ಕ್ರಮವನ್ನು ತೀವ್ರವಾಗಿ ಖಂಡಿಸಿ, ಶುಲ್ಕ ಜಾರಿಯನ್ನು ಸಂಪೂರ್ಣವಾಗಿ ಹಿಂಪಡೆಯುವಂತೆ ಆಗ್ರಹಿಸಿದ್ದವು.
ಸರ್ಕಾರ ಹಾಗೂ ಎನ್ಪಿಸಿಎಲ್ ಶುಲ್ಕ ವಿಧಿಸುವ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರೂ, ಸಾರ್ವಜನಿಕ ಮತ್ತು ವರ್ತಕರ ಹಿತದೃಷ್ಟಿಯಿಂದ ಅನುಷ್ಠಾನದ ದಿನಾಂಕವನ್ನು ಮಾತ್ರ ಮುಂದೂಡಿವೆ. ದೀಪಾವಳಿ ಮುಗಿದ ಬಳಿಕ ಈ ನೂತನ ಶುಲ್ಕ ಜಾರಿಯಾಗುವ ಅಧಿಕೃತ ದಿನಾಂಕವನ್ನು ಪ್ರಕಟಿಸುವುದಾಗಿ ಎನ್ಪಿಸಿಎಲ್ ತಿಳಿಸಿದೆ.