ಮುಂಬೈ : ಮುಂದಿನ ಇಂಡಿಯನ್ ಪ್ರೀಮಿಯರ್ ಲೀಗ್ (IPL) 2027ರ ಆವೃತ್ತಿಗಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು (BCCI) ಸಿದ್ಧತೆಗಳನ್ನು ಚುರುಕುಗೊಳಿಸಿದೆ. ಬಹುನಿರೀಕ್ಷಿತ ಈ ಮಿನಿ ಆಟಗಾರರ ಹರಾಜು ಪ್ರಕ್ರಿಯೆಯ ದಿನಾಂಕ ಹಾಗೂ ಸ್ಥಳ ಅಂತಿಮಗೊಂಡಿದ್ದು, ಗೋವಾದ ಐಷಾರಾಮಿ ಐಟಿಸಿ ಗ್ರ್ಯಾಂಡ್ (ITC Grand) ಹೋಟೆಲ್ನಲ್ಲಿ 2026ರ ಡಿಸೆಂಬರ್ 16ರಂದು ಹರಾಜು ಜರುಗಲಿದೆ ಎಂದು ಕ್ರಿಕ್ಬಜ್ ವರದಿ ಮಾಡಿದೆ. ಬಿಸಿಸಿಐನ ಲಾಜಿಸ್ಟಿಕ್ಸ್ ತಂಡವು ಈ ಕುರಿತು ಎಲ್ಲಾ ಹತ್ತು ಫ್ರಾಂಚೈಸಿಗಳಿಗೆ ವಾಟ್ಸಾಪ್ ಸಂದೇಶದ ಮೂಲಕ ಪ್ರಾಥಮಿಕ ಮಾಹಿತಿಯನ್ನು ರವಾನಿಸಿದೆ.
ಹರಾಜಿಗೂ ಮುನ್ನ ದಿನ ಅಂದರೆ ಡಿಸೆಂಬರ್ 15ರಂದೇ ಫ್ರಾಂಚೈಸಿಗಳ ಮಾಲೀಕರು, ಕೋಚ್ಗಳು ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ (CEO) ಜೊತೆಗೆ ಬಿಸಿಸಿಐ ಪ್ರಮುಖ ಬ್ರೀಫಿಂಗ್ ಸಭೆಯನ್ನು ನಡೆಸಲಿದೆ. ಈ ಸಭೆಯಲ್ಲಿ ಹರಾಜಿಗೆ ಸಂಬಂಧಿಸಿದ ಕಟ್ಟುನಿಟ್ಟಿನ ನಿಯಮಾವಳಿಗಳು, ಪರ್ಸ್ ಮೊತ್ತದ ಮಿತಿ ಹಾಗೂ ಆಟಗಾರರ ನೋಂದಣಿ ಪ್ರಕ್ರಿಯೆಗಳ ಬಗ್ಗೆ ವಿಸ್ತೃತ ಚರ್ಚೆ ನಡೆಯಲಿದೆ. ಇದರ ಬೆನ್ನಲ್ಲೇ ಡಿಸೆಂಬರ್ 16ರಂದು ಅಧಿಕೃತ ಬಿಡ್ಡಿಂಗ್ ಪ್ರಕ್ರಿಯೆ ಆರಂಭವಾಗಲಿದೆ.
ಬಿಸಿಸಿಐ ಕಡೆಯಿಂದ ಅಧಿಕೃತ ಇಮೇಲ್ ಅಧಿಸೂಚನೆ ಶೀಘ್ರದಲ್ಲೇ ಹೊರಬೀಳುವ ನಿರೀಕ್ಷೆಯಿದ್ದರೂ, ಫ್ರಾಂಚೈಸಿಗಳ ಸಿದ್ಧತೆ ಮತ್ತು ವಿಮಾನ ಹಾಗೂ ಹೋಟೆಲ್ ಬುಕಿಂಗ್ಗೆ ಅನುಕೂಲವಾಗಲೆಂದು ಮುಂಚಿತವಾಗಿಯೇ ವಾಟ್ಸಾಪ್ ಮೂಲಕ ಈ ಅಪ್ಡೇಟ್ ನೀಡಲಾಗಿದೆ. ಬಹುತೇಕ ಫ್ರಾಂಚೈಸಿಗಳು ಸಂದೇಶ ತಲುಪಿರುವುದನ್ನು ಖಚಿತಪಡಿಸಿದ್ದು, ತಮ್ಮ ಆಂತರಿಕ ಸಭೆಗಳು ಮತ್ತು ಪ್ರಯಾಣದ ಸಿದ್ಧತೆಗಳಲ್ಲಿ ತೊಡಗಿವೆ.
ದಿನಾಂಕ ಮತ್ತು ಸ್ಥಳ ಖಚಿತವಾಗುತ್ತಿದ್ದಂತೆ ಎಲ್ಲಾ ಐಪಿಎಲ್ ಫ್ರಾಂಚೈಸಿಗಳು ತಮ್ಮ ರಣತಂತ್ರಗಳನ್ನು ಚುರುಕುಗೊಳಿಸಿವೆ. ಮುಂಬರುವ 2027ರ ಋತುವಿಗಾಗಿ ತಂಡವನ್ನು ಬಲಪಡಿಸಲು ಯಾವ ಆಟಗಾರರನ್ನು ಉಳಿಸಿಕೊಳ್ಳಬೇಕು (Retentions) ಹಾಗೂ ಯಾರನ್ನು ಬಿಡುಗಡೆ ಮಾಡಬೇಕು (Releases) ಎಂಬ ಕಸರತ್ತು ಆರಂಭವಾಗಿದೆ. ಪ್ರತಿಯೊಂದು ತಂಡವು ದೇಶ-ವಿದೇಶಗಳ ಪ್ರತಿಭಾವಂತ ಯುವ ಹಾಗೂ ಅನುಭವಿ ಆಟಗಾರರ ಮೇಲೆ ಕಣ್ಣಿಟ್ಟಿದ್ದು, ಸಮತೋಲಿತ ತಂಡವನ್ನು ಕಟ್ಟಲು ಸಜ್ಜಾಗುತ್ತಿವೆ.