ಅಮೃತಸರದಲ್ಲಿ ನಡೆದ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಮಡ್ ಸಂಧು ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಹ್ಮದಾಬಾದ್ ಅಪರಾಧ ವಿಭಾಗದ ಪೊಲೀಸರು ಗುರುವಾರ ಪ್ರಮುಖ ಆರೋಪಿಯನ್ನು ಬಂಧಿಸಿದ್ದಾರೆ. ಪರಮಿಂದರ್ ಕಾಕಾ ಅಲಿಯಾಸ್ ಪರಮಿಂದರ್ ಪ್ರಸಾದ್ ಬಂಧಿತ ಆರೋಪಿಯಾಗಿದ್ದು, ಹತ್ಯೆಗೈದ ಶೂಟರ್ ಎಂದು ಪೊಲೀಸರು ಗುರುತಿಸಿದ್ದಾರೆ.
ಪಂಜಾಬಿ ಇನ್ಫ್ಲುಯೆನ್ಸರ್ ಮೇಲೆ ನಡೆದ ಈ ದಾಳಿಯಲ್ಲಿ ಗುಂಡು ಹಾರಿಸಿರುವುದು ಮಾತ್ರವಲ್ಲದೆ, ಕೃತ್ಯಕ್ಕೆ ಬಳಸಲಾದ ಮೋಟಾರ್ ಸೈಕಲ್ ಅನ್ನು ಕೂಡ ಈತನೇ ವ್ಯವಸ್ಥೆ ಮಾಡಿದ್ದ ಎಂದು ಅಪರಾಧ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ. ಅಹ್ಮದಾಬಾದ್ನಲ್ಲಿ ಇಂದು ನಡೆಯಲಿರುವ ಪತ್ರಿಕಾಗೋಷ್ಠಿಯಲ್ಲಿ ಈ ಬಂಧನಕ್ಕೆ ಸಂಬಂಧಿಸಿದ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸುವ ನಿರೀಕ್ಷೆಯಿದೆ.
ಅಮೃತಸರ ಕಂಟೋನ್ಮೆಂಟ್ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 103 ರಡಿ ಕೊಲೆ ಪ್ರಕರಣ ದಾಖಲಾಗಿದ್ದು, ಸಂಧು ಅವರ ಹತ್ಯೆಗೂ ಗ್ಯಾಂಗ್ಸ್ಟರ್ ಗೋಲ್ಡಿ ಧಿಲ್ಲೋನ್ ಅವರ ಅಂತಾರಾಷ್ಟ್ರೀಯ ನೆಟ್ವರ್ಕ್ಗೂ ಇ1ರುವ ನಂಟಿನ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಮಡ್ ಸಂಧು ನಿಧನರಾದ ಮರುದಿನವೇ ಗೋಲ್ಡಿ ಧಿಲ್ಲೋನ್ ಮತ್ತು ಸಹಚರ ಜಗ್ಗಾ ತರ್ನ್ ತರಣ್ ಅವರ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ವೊಂದು ಹರಿದಾಡಿತ್ತು. ಯುವ ಪೀಳಿಗೆಯನ್ನು ದಾರಿ ತಪ್ಪಿಸುತ್ತಿದ್ದಾರೆ ಎಂಬ ಕಾರಣಕ್ಕೆ ಸಂಧು ಅವರನ್ನು ಗುರಿಯಾಗಿಸಲಾಗಿದೆ ಎಂದು ಆ ಪೋಸ್ಟ್ನಲ್ಲಿ ಉಲ್ಲೇಖಿಸಲಾಗಿತ್ತು.
ಅಮೃತಸರದ ನಿವಾಸಿಯಾಗಿದ್ದ ಮಧುಸೂದನ್ ಸಂಧು ಅಲಿಯಾಸ್ ಮಡ್ ಸಂಧು ಅವರು ಮೇಕ್ಅಪ್ ಆರ್ಟಿಸ್ಟ್, ಸ್ಟೈಲಿಸ್ಟ್ ಮತ್ತು ಕಂಟೆಂಟ್ ಕ್ರಿಯೇಟರ್ ಆಗಿದ್ದರು. ನಿವೃತ್ತ ಪಂಜಾಬ್ ಪೊಲೀಸ್ ಅಧಿಕಾರಿಯ ಮಗನಾದ ಇವರು ಇನ್ಸ್ಟಾಗ್ರಾಮ್ನಲ್ಲಿ ಲಕ್ಷಾಂತರ ಅನುಯಾಯಿಗಳನ್ನು ಹೊಂದಿದ್ದರು. 2024 ರ 'ಒಯ್ ಭೋಲೆ ಒಯ್' ಪಂಜಾಬಿ ಚಲನಚಿತ್ರದಲ್ಲೂ ಅಭಿನಯಿಸಿದ್ದ ಅವರು, ಈ ತಿಂಗಳ ಕೊನೆಯಲ್ಲಿ 'ಬಿಗ್ ಬಾಸ್' ಕಾರ್ಯಕ್ರಮಕ್ಕೆ ವೈಲ್ಡ್ಕಾರ್ಡ್ ಸ್ಪರ್ಧಿಯಾಗಿ ಪ್ರವೇಶಿಸಲು ಸಿದ್ಧತೆ ನಡೆಸಿದ್ದರು.
ಅಕ್ಟೋಬರ್ 3 ರಂದು ತಮ್ಮ ವಾಹನವನ್ನು ಸ್ವಚ್ಛಗೊಳಿಸಲು ಕಾರು ವಾಶ್ ಕೇಂದ್ರಕ್ಕೆ ತೆರಳಿದ್ದಾಗ ಬೈಕಿನಲ್ಲಿ ಬಂದ ದುಷ್ಕರ್ಮಿಗಳು ಸಮೀಪದಿಂದಲೇ ಗುಂಡು ಹಾರಿಸಿ ಪರಾರಿಯಾಗಿದ್ದರು. ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಅವರು ಕೊನೆಯುಸಿರೆಳೆದಿದ್ದರು. ಹತ್ಯೆಗೂ ಮುನ್ನ ಅವರನ್ನು ಗಮನಿಸಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದು, ಸಿಸಿಟಿವಿ ದೃಶ್ಯಾವಳಿಗಳು ಮತ್ತು ಮೊಬೈಲ್ ದಾಖಲೆಗಳನ್ನು ಪರಿಶೀಲಿಸಿ ತನಿಖೆ ತೀವ್ರಗೊಳಿಸಲಾಗಿದೆ.