ಮಂಡ್ಯ/ಸಕಲೇಶಪುರ: ಮಂಡ್ಯದ ರಾಜ್ಯ ಪೀಡೆನಾಶಕ ಪರಿವೀಕ್ಷಣಾ ಪ್ರಯೋಗಾಲಯದಲ್ಲಿ ಕೃಷಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಚಂದ್ರೇಶ್ M.S (48) ಅವರು ಹೃದಯಾಘಾತದಿಂದ ಆಕಸ್ಮಿಕವಾಗಿ ಕೊನೆಯುಸಿರೆಳೆದಿದ್ದಾರೆ. ತಮ್ಮ ಕುಟುಂಬದ ಸದಸ್ಯರೊಂದಿಗೆ ಧರ್ಮಸ್ಥಳಕ್ಕೆ ಪ್ರಯಾಣಿಸುತ್ತಿದ್ದ ವೇಳೆ ಸಕಲೇಶಪುರದ ಬಳಿ ಅವರಿಗೆ ತೀವ್ರ ಸ್ವರೂಪದ ಎದೆನೋವು ಕಾಣಿಸಿಕೊಂಡಿದೆ. ತಕ್ಷಣವೇ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯದಲ್ಲೇ ಚಿಕಿತ್ಸೆ ಫಲಿಸದೆ ಅವರು ಕೊನೆಯುಸಿರೆಳೆದಿದ್ದಾರೆ.
ಅಕಾಲಿಕವಾಗಿ ಇಹಲೋಕ ತ್ಯಜಿಸಿದ ಕೃಷಿ ಅಧಿಕಾರಿ ಚಂದ್ರೇಶ್ ಅವರ ನಿಧನಕ್ಕೆ ಕೃಷಿ ಇಲಾಖೆಯ ಅಧಿಕಾರಿ ಸಿಬ್ಬಂದಿ ಹಾಗೂ ಹಲವು ಗಣ್ಯರು ತೀವ್ರ ಕಂಬನಿ ಮಿಡಿದು, ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿ ನೀಡಲೆಂದು ಸಂತಾಪ ಸೂಚಿಸಿದ್ದಾರೆ. ಮೃತ ಅಧಿಕಾರಿಯ ಅಂತ್ಯಸಂಸ್ಕಾರವು ನಾಳೆ ಅವರ ಸ್ವಗ್ರಾಮವಾದ ಪಾಂಡವಪುರ ತಾಲೂಕಿನ ಮಾಣಿಕನಹಳ್ಳಿಯಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.