ಮಂಡ್ಯ: ಮಂಡ್ಯ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ (ಮನ್ ಮುಲ್) ಬಹುಚರ್ಚಿತ ಹಾಲಿನ ಪುಡಿ ಕಲಬೆರಕೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಒಕ್ಕೂಟದ ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಉಮ್ಮಡಹಳ್ಳಿ ಶಿವಪ್ಪ ಅವರನ್ನು ಮದ್ದೂರು ಪೊಲೀಸರು ನಿನ್ನೆ ರಾತ್ರಿ ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಶಿವಪ್ಪ ಅವರ ಮೇಲ್ನೋಟದ ಪಾತ್ರ ಕಂಡುಬಂದಿರುವ ಹಿನ್ನೆಲೆಯಲ್ಲಿ ಪೊಲೀಸರು ಈ ಕ್ರಮ ಕೈಗೊಂಡಿದ್ದು, ಇಂದು ಅವರನ್ನು ಮದ್ದೂರು ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆಯಿದೆ. ಇದರೊಂದಿಗೆ ಈ ಪ್ರಕರಣದಲ್ಲಿ ಬಂಧಿತರಾದ ಆರೋಪಿಗಳ ಸಂಖ್ಯೆ ಆರಕ್ಕೆ ಏರಿಕೆಯಾಗಿದೆ.
ಪ್ರಕರಣದ ಮೊದಲ ಆರೋಪಿ (A1) ಪ್ರದೀಪ್ ಕುಮಾರ್ ಬಿಡುಗಡೆ ಮಾಡಿದ್ದ ಆಡಿಯೋ ಒಂದರಲ್ಲಿ ಶಿವಪ್ಪ ಅವರ ಹೆಸರು ಉಲ್ಲೇಖವಾಗಿದ್ದು, ಅವರು ನಿರ್ದೇಶಕರೊಬ್ಬರ ಜೊತೆ ಮಾತನಾಡಿದ್ದಾರೆ ಎನ್ನಲಾದ ಸಂಭಾಷಣೆ ಪ್ರಕರಣಕ್ಕೆ ದೊಡ್ಡ ತಿರುವು ನೀಡಿತ್ತು. ಈ ಸಾಕ್ಷ್ಯದ ಆಧಾರದ ಮೇಲೆ ಪೊಲೀಸರು ಯಾದವ್ ಅವರನ್ನು ಮತ್ತೆ ಕಸ್ಟಡಿಗೆ ಪಡೆದು, ಜಾದವ್ ಮತ್ತು ಶಿವಪ್ಪ ಅವರನ್ನು ಮುಖಾಮುಖಿ ಕುಳಿತಿಸಿ ತೀವ್ರ ವಿಚಾರಣೆ ನಡೆಸಿದ್ದರು. ವಿಚಾರಣೆ ವೇಳೆ ಶಿವಪ್ಪ ವಿರುದ್ಧ ಜಾದವ್ ನೇರವಾಗಿ ಆರೋಪ ಮಾಡಿದ್ದು, ಇಬ್ಬರ ನಡುವೆ ಕಾದಾಟ-ಮಾತಿನ ಚಕಮಕಿ ಕೂಡ ನಡೆಯಿತು. ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ಪೊಲೀಸರು ಶಿವಪ್ಪ ಅವರನ್ನು ಅಧಿಕೃತವಾಗಿ ಬಂಧಿಸಿದ್ದಾರೆ.