ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ತನಿಖೆಯಲ್ಲಿ ಲೋಪ ಹಾಗೂ ಸಾಕ್ಷ್ಯನಾಶಕ್ಕೆ ಸಲಹೆ ನೀಡಿದ ಗಂಭೀರ ಆರೋಪದ ಹಿನ್ನೆಲೆಯಲ್ಲಿ, ಎಸಿಪಿ ಚಂದನ್ ಮತ್ತು ಸಬ್ ಇನ್ಸ್ಪೆಕ್ಟರ್ ವಿನಯ್ ವಿರುದ್ಧ ಇಲಾಖಾ ತನಿಖೆಗೆ ಬೆಂಗಳೂರು ಪೊಲೀಸ್ ಕಮಿಷನರ್ ಸೀಮಂತ್ಕುಮಾರ್ ಸಿಂಗ್ ಆದೇಶಿಸಿದ್ದಾರೆ. ಕೊಲೆ ನಡೆದ ತಕ್ಷಣ ಆರೋಪಿಗಳು ಎಸ್ಐಗೆ ಕರೆ ಮಾಡಿ, ತಪ್ಪಿಸಿಕೊಳ್ಳುವುದು ಹೇಗೆ ಮತ್ತು ಮೃತದೇಹ ವಿಲೇವಾರಿ ಕುರಿತು ಸಲಹೆ ಪಡೆದಿದ್ದಾರೆ ಎಂಬ ಆರೋಪಗಳು ಕೇಳಿಬಂದಿದ್ದವು.
ಈ ಕುರಿತು ಮೈಸೂರು ಮೂಲದ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಅವರು ಡಿಜಿ ಮತ್ತು ಐಜಿಪಿ ಎಂ.ಎ. ಸಲೀಂ ಅವರನ್ನು ಭೇಟಿಯಾಗಿ ತನಿಖೆಯಲ್ಲಿ ಅಕ್ರಮ ಹಾಗೂ ಸಾಕ್ಷ್ಯ ತಿರುಚುವಿಕೆ ನಡೆದಿರುವ ಬಗ್ಗೆ ಅಧಿಕೃತ ದೂರು ದಾಖಲಿಸಿದ್ದರು. ದೂರಿನ ಗಂಭೀರತೆಯನ್ನು ಪರಿಗಣಿಸಿ ಅಧಿಕಾರಿಗಳ ವಿರುದ್ಧ ತನಿಖೆಗೆ ಶಿಫಾರಸು ಮಾಡಲಾಗಿದ್ದು, ಸದ್ಯ ಪಶ್ಚಿಮ ವಲಯದ ಜಂಟಿ ಪೊಲೀಸ್ ಆಯುಕ್ತ ವಂಶಿ ಕೃಷ್ಣ ಅವರಿಗೆ ಪ್ರಕರಣದ ಸಮಗ್ರ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ.