ಉತ್ತರಾಖಂಡ : ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯಲ್ಲಿ ಶನಿವಾರ ರಾತ್ರಿ 4.2 ತೀವ್ರತೆಯ ಭೂಕಂಪ ಸಂಭವಿಸಿದ್ದು, ಉತ್ತರಕಾಶಿ ಪಟ್ಟಣ ಹಾಗೂ ಯಮುನೋತ್ರಿ ಕಣಿವೆ ಪ್ರದೇಶದಲ್ಲಿ ಬಲವಾದ ಕಂಪನದ ಅನುಭವವಾಗಿದೆ. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ಮಾಹಿತಿಯ ಪ್ರಕಾರ, ರಾತ್ರಿ 8:07 ರ ಸುಮಾರಿಗೆ ಸಂಭವಿಸಿದ ಈ ಭೂಕಂಪದ ಕೇಂದ್ರಬಿಂದುವು ಉತ್ತರಕಾಶಿಯಿಂದ ವಾಯುವ್ಯಕ್ಕೆ ಎರಡು ಕಿಲೋಮೀಟರ್ ದೂರದಲ್ಲಿ ಮತ್ತು 11 ಕಿಲೋಮೀಟರ್ ಆಳದಲ್ಲಿದೆ. ದಿಢೀರ್ ಸಂಭವಿಸಿದ ಈ ತೀವ್ರ ಕಂಪನದಿಂದಾಗಿ ಮನೆಗಳಲ್ಲಿದ್ದ ಟೆಲಿವಿಷನ್ಗಳು ಅಲುಗಾಡಿದ್ದು, ಭಯಭೀತರಾದ ಜನರು ಮನೆಯಿಂದ ಹೊರಗೆ ಓಡಿಬಂದಿದ್ದಾರೆ.
ಕೇವಲ ನಾಲ್ಕು ದಿನಗಳ ಅಂತರದಲ್ಲಿ ಉತ್ತರಾಖಂಡದಲ್ಲಿ 4.0 ಗಿಂತ ಹೆಚ್ಚಿನ ತೀವ್ರತೆಯ ಭೂಕಂಪ ಸಂಭವಿಸಿರುವುದು ಇದು ಎರಡನೆಯದ್ದಾಗಿದೆ. ಅಕ್ಟೋಬರ್ 6 ರಂದು ಚಮೋಲಿ ಜಿಲ್ಲೆಯಲ್ಲಿ 4.9 ತೀವ್ರತೆಯ ಭೂಕಂಪ ದಾಖಲಾಗಿತ್ತು. ಸದ್ಯದವರೆಗೆ ಯಾವುದೇ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿಗೆ ಹಾನಿ ಸಂಭವಿಸಿಲ್ಲ ಎಂದು ಉತ್ತರಾಖಂಡ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (USDMA) ಸ್ಪಷ್ಟಪಡಿಸಿದ್ದು, ಅಧಿಕಾರಿಗಳು ಪರಿಸ್ಥಿತಿಯ ಮೇಲೆ ನಿರಂತರ ನಿಗಾ ಇರಿಸಿದ್ದಾರೆ.