ಬೆಂಗಳೂರು : ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ (SMVT) ನಿಂದ ಬಿಹಾರದ ದಾನಪೂರ್‌ಗೆ ತೆರಳುತ್ತಿದ್ದ ‘ದಾನಪೂರ್ ಎಕ್ಸ್‌ಪ್ರೆಸ್’ ರೈಲಿನಲ್ಲಿ ಚಲಿಸುತ್ತಿದ್ದಾಗಲೇ ಭಾರಿ ತಾಂತ್ರಿಕ ದೋಷ ಕಂಡುಬಂದಿದ್ದು, ಅದೃಷ್ಟವಶಾತ್ ಭಾರಿ ಅನಾಹುತವೊಂದು ತಪ್ಪಿದೆ.
ಏನಾಯಿತು?: ಮೇ 23 ರ ತಡರಾತ್ರಿ ಹೊರಟಿದ್ದ ಈ ರೈಲು, ಆಂಧ್ರಪ್ರದೇಶದ ವಿಜಯವಾಡ ನಿಲ್ದಾಣವನ್ನು ದಾಟಿ ಸುಮಾರು 30 ಕಿಲೋಮೀಟರ್ ದೂರ ಸಾಗುತ್ತಿದ್ದಾಗ, ರೈಲಿನ ಬೋಗಿಗಳನ್ನು ಜೋಡಿಸುವ ‘ಜಾಯಿಂಟ್ ವೀಲ್’ (Joint Wheel/Coupling) ಕಟ್ ಆಗಿದೆ.ಆ ಸಮಯದಲ್ಲಿ ರೈಲು ಗಂಟೆಗೆ ಸುಮಾರು 100 ಕಿಲೋಮೀಟರ್ ವೇಗದಲ್ಲಿ ಸಂಚರಿಸುತ್ತಿತ್ತು. ಕೊಂಡಿ ಕಡಿತಗೊಂಡ ತಕ್ಷಣವೇ ಎಂಜಿನ್ ಇರುವ ಬೋಗಿಗಳು ಮತ್ತು ಪ್ರಯಾಣಿಕರಿದ್ದ ಬೋಗಿಗಳು ಬೇರ್ಪಟ್ಟಿವೆ.
ಪ್ರಯಾಣಿಕರ ಆತಂಕ: ಅತಿ ವೇಗದಲ್ಲಿ ಚಲಿಸುತ್ತಿದ್ದಾಗ ಬೋಗಿಗಳು ಬೇರ್ಪಟ್ಟಿದ್ದರಿಂದ ಪ್ರಯಾಣಿಕರು ತೀವ್ರ ಆತಂಕಕ್ಕೆ ಒಳಗಾಗಿದ್ದರು. ರೈಲು ಹಳಿತಪ್ಪುವ ಅಥವಾ ಬೋಗಿಗಳು ಡಿಕ್ಕಿ ಹೊಡೆಯುವ ಭೀತಿಯಿತ್ತು.ಅದೃಷ್ಟವಶಾತ್ ರೈಲು ನಿಯಂತ್ರಣ ಕಳೆದುಕೊಳ್ಳದ ಕಾರಣ ಯಾವುದೇ ಪ್ರಾಣಹಾನಿ ಅಥವಾ ಗಾಯಗಳಾಗಿಲ್ಲ.
ಸಂಚಾರದಲ್ಲಿ ವಿಳಂಬ: ರೈಲ್ವೆ ತಾಂತ್ರಿಕ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಬಂದು ದುರಸ್ತಿ ಕಾರ್ಯ ನಡೆಸಿದರು. ಇದರಿಂದಾಗಿ ರೈಲು ಸಂಚಾರ ಸುಮಾರು 4 ಗಂಟೆಗಳ ಕಾಲ ವಿಳಂಬವಾಯಿತು. ತದನಂತರ ರೈಲು ಬಿಹಾರದತ್ತ ತನ್ನ ಪ್ರಯಾಣ ಮುಂದುವರಿಸಿತು.ಈ ಘಟನೆಯು ತಡವಾಗಿ ಬೆಳಕಿಗೆ ಬಂದಿದ್ದು, ರೈಲು ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಈ ತಾಂತ್ರಿಕ ಲೋಪವು ಗಂಭೀರ ವಿಷಯವಾಗಿ ಚರ್ಚೆಯಾಗುತ್ತಿದೆ.