ಬೆಂಗಳೂರು: ರಾಜಧಾನಿಯ ಬೆನ್ನಿಗಾನಹಳ್ಳಿಯಲ್ಲಿ ಬೆಸ್ಕಾಂನ ಟ್ರಾನ್ಸ್ಫಾರ್ಮರ್ ಒಂದಕ್ಕೆ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡು ಸ್ಫೋಟಗೊಂಡ ಪರಿಣಾಮ ನಾಲ್ವರು ತೀವ್ರವಾಗಿ ಗಾಯಗೊಂಡಿದ್ದು, ಸಾರ್ವಜನಿಕರಲ್ಲಿ ಭೀತಿ ಮೂಡಿಸಿದ ಘಟನೆ ನಡೆದಿದೆ. ಮಿತಿಮೀರಿದ ವಿದ್ಯುತ್ ಲೋಡ್ (Overload) ಪರಿಣಾಮವಾಗಿ ಆಯಿಲ್ ಲೀಕ್ ಆಗಿ ಟ್ರಾನ್ಸ್ಫಾರ್ಮರ್ ಸ್ಫೋಟಗೊಂಡಿದೆ ಎಂದು ಹೇಳಲಾಗಿದೆ. ಘಟನೆಯ ತೀವ್ರತೆಗೆ ಹತ್ತಿರದಲ್ಲೇ ಪಾರ್ಕ್ ಮಾಡಲಾಗಿದ್ದ ಎರಡು ದ್ವಿಚಕ್ರ ವಾಹನಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿವೆ.
ಈ ಭೀಕರ ಅಪಘಾತದಲ್ಲಿ ನಾರಾಯಣ್, ಅಜೀಮ್ ಪಾಷಾ, ಚೇತನ್ ಮತ್ತು ಲಕ್ಷ್ಮಿ ಎಂಬುವರಿಗೆ ತೀವ್ರ ಸ್ವರೂಪದ ಸುಟ್ಟ ಗಾಯಗಳಾಗಿದ್ದು, ತಕ್ಷಣವೇ ಸ್ಥಳೀಯರ ನೆರವಿನಿಂದ ಅವರನ್ನು ಸಮೀಪದ ವಿಕ್ಟೊರಿಯ ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಬೆಸ್ಕಾಂ ಅಧಿಕಾರಿಗಳು ಹಾಗೂ ಪೊಲೀಸರು ಪರಿಶೀಲನೆ ನಡೆಸಿದ್ದು, ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.