ಬ್ರಿಸ್ಬೇನ್: 2032ರ ಬ್ರಿಸ್ಬೇನ್ ಒಲಿಂಪಿಕ್ ಮತ್ತು ಪ್ಯಾರಾಲಿಂಪಿಕ್ ಕ್ರೀಡಾಕೂಟದ ಮೊದಲ ಪ್ರಮುಖ ದೃಶ್ಯ ಗುರುತು (ಲಾಂಛನ/ಎಂಬ್ಲೆಮ್) ಅಧಿಕೃತವಾಗಿ ಅನಾವರಣಗೊಂಡಿದೆ. ಆಸ್ಟ್ರೇಲಿಯಾದ ರಾಷ್ಟ್ರೀಯ ಪ್ರಾಣಿಯಾದ ಕಾಂಗರೂ ಈ ಬಾರಿ ಮುಂಚೂಣಿಯಲ್ಲಿರಬಹುದು ಎಂಬ ನಿರೀಕ್ಷೆಗಳ ನಡುವೆ, ಆಸ್ಟ್ರೇಲಿಯಾದ ವಿಶಿಷ್ಟ ಪಕ್ಷಿ 'ಪಿಂಕ್ ಕಕಾಟೋ' (ಗುಲಾಬಿ ಬಣ್ಣದ ಗಿಳಿ ಜಾತಿಯ ಪಕ್ಷಿ) ಕ್ರೀಡಾಕೂಟದ ಅಧಿಕೃತ ಲಾಂಛನವಾಗಿ ಹೊರಹೊಮ್ಮಿದೆ.
ಲಾಂಛನದ ವಿನ್ಯಾಸ ಮತ್ತು ವಿಶೇಷತೆ
ಗುಲಾಬಿ ಬಣ್ಣದ ಕಕಾಟೋ ಪಕ್ಷಿಯ ಜುಟ್ಟಿನ ಮಾದರಿಯಲ್ಲಿ ಈ ಲಾಂಛನವನ್ನು ವಿನ್ಯಾಸಗೊಳಿಸಲಾಗಿದ್ದು, ಅದು ಒಲಿಂಪಿಕ್ ಮತ್ತು ಪ್ಯಾರಾಲಿಂಪಿಕ್ ಜ್ಯೋತಿಯನ್ನು ನೆನಪಿಸುವಂತಿದೆ. ಇಡೀ ಲಾಂಛನದ ಬಾಹ್ಯರೇಖೆಯು ಆತಿಥೇಯ ಕ್ವೀನ್ಸ್‌ಲ್ಯಾಂಡ್ ಪ್ರಾಂತ್ಯದ ನಕ್ಷೆಯ ಆಕಾರವನ್ನು ಹೋಲುತ್ತಿದ್ದರೆ, ಪಕ್ಷಿಯ ಕಣ್ಣು ಬ್ರಿಸ್ಬೇನ್ ನಗರವನ್ನು ಪ್ರತಿನಿಧಿಸುತ್ತದೆ. ಸ್ಥಳೀಯ ಮೂಲನಿವಾಸಿಗಳ (ಫಸ್ಟ್ ನೇಷನ್ಸ್) ಸಂಸ್ಕೃತಿಯಲ್ಲಿ ಕಕಾಟೋ ಪಕ್ಷಿಗಳನ್ನು ಸಂದೇಶವಾಹಕರು ಎಂದು ಪರಿಗಣಿಸಲಾಗಿದ್ದು, ಈ ವಿನ್ಯಾಸವು ಪ್ರಕೃತಿ, ಸಂಸ್ಕೃತಿ ಮತ್ತು ಜನರನ್ನು ಬೆಸೆಯುವ ಸಂಕೇತವಾಗಿದೆ.
ಅಧಿಕೃತ ಬಿಡುಗಡೆಗೂ ಮುನ್ನವೇ ಲೀಕ್
ಕ್ವೀನ್ಸ್‌ಲ್ಯಾಂಡ್ ರಾಜ್ಯಾದ್ಯಂತ ಕಳೆದ ಒಂದು ವಾರದಿಂದ ಇಯಾನ್ ಥೋರ್ಪ್, ಅನ್ನಾ ಮಿಯರ್ಸ್ ಸೇರಿದಂತೆ ಹಲವು ದಿಗ್ಗಜ ಕ್ರೀಡಾಪಟುಗಳ ಮೂಲಕ ಲಾಂಛನದ ತುಣುಕುಗಳನ್ನು ಹಂತ-ಹಂತವಾಗಿ ಪರಿಚಯಿಸಲಾಗುತ್ತಿತ್ತು. ಬ್ರಿಸ್ಬೇನ್‌ನಲ್ಲಿ ನಡೆಯುವ ಸಮುದಾಯ ಸಂಭ್ರಮಾಚರಣೆಯಲ್ಲಿ ಪೂರ್ಣ ಲಾಂಛನ ಪ್ರಕಟಿಸುವುದು ಆಯೋಜಕರ ಯೋಜನೆಯಾಗಿತ್ತು. ಆದರೆ, ನಿಗದಿತ ದಿನಾಂಕಕ್ಕಿಂತ ಮೂರು ದಿನ ಮುಂಚಿತವಾಗಿಯೇ ಬ್ರಿಸ್ಬೇನ್ 2032ರ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ವಿವರಣಾತ್ಮಕ ವಿಡಿಯೋ ಆಕಸ್ಮಿಕವಾಗಿ ಅಪ್‌ಲೋಡ್ ಆಗಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಯಿತು. ನಂತರ ವಿಡಿಯೋವನ್ನು ತೆಗೆದುಹಾಕಲಾಯಿತಾದರೂ, ಈ ಅನಿರೀಕ್ಷಿತ ಸೋರಿಕೆಯು ಜಾಗತಿಕ ಮಟ್ಟದಲ್ಲಿ ಭಾರಿ ಪ್ರಚಾರ ಮತ್ತು ಸಕಾರಾತ್ಮಕ ಪ್ರತಿಕ್ರಿಯೆ ತಂದುಕೊಟ್ಟಿದೆ ಎಂದು ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಬ್ರೆಂಟ್ ಹಿಲ್ ತಿಳಿಸಿದ್ದಾರೆ.
ಕಾಂಗರೂ ಬದಲಿಗೆ ಕಕಾಟೋ ಆಯ್ಕೆ ಏಕೆ?
ಆಸ್ಟ್ರೇಲಿಯಾದ ಪ್ರಸಿದ್ಧ ಕಾಂಗರೂ, ಕೋಲಾ ಹಾಗೂ ಆಸ್ಟ್ರೇಲಿಯಾದಲ್ಲಿ "ಬಿನ್ ಚಿಕನ್" ಎಂದೇ ಕರೆಯಲ್ಪಡುವ ಐಬಿಸ್ ಹಕ್ಕಿಗಳೂ ಸಹ ಈ ರೇಸ್‌ನಲ್ಲಿದ್ದವು. ಅಂತಿಮವಾಗಿ ಕಕಾಟೋ ಪಕ್ಷಿಯ ಲವಲವಿಕೆ, ವಿಶಿಷ್ಟ ಜುಟ್ಟು ಹಾಗೂ ಕ್ವೀನ್ಸ್‌ಲ್ಯಾಂಡ್ ಸಂಸ್ಕೃತಿಗೆ ಹೊಂದುವ ವಿನ್ಯಾಸದಿಂದಾಗಿ ಇದಕ್ಕೆ ಮನ್ನಣೆ ನೀಡಲಾಯಿತು. ಈ ಲಾಂಛನವು ಬ್ರಿಸ್ಬೇನ್ ನಗರದ ಚೈತನ್ಯ, ಸ್ನೇಹಪರತೆ ಹಾಗೂ ಗಟ್ಟಿತನವನ್ನು ಜಗತ್ತಿಗೆ ಸಾರುತ್ತದೆ ಎಂದು ಬ್ರಿಸ್ಬೇನ್ ಮೇಯರ್ ಆಡ್ರಿಯನ್ ಶ್ರಿನರ್ ಹರ್ಷ ವ್ಯಕ್ತಪಡಿಸಿದ್ದಾರೆ.
ಇದು ಅಧಿಕೃತ ಮ್ಯಾಸ್ಕಾಟ್ ಅಲ್ಲ: ಇನ್ನಷ್ಟೇ ಬರಲಿದೆ ಲಾಂಛನ ಪ್ರಾಣಿ
ಪ್ರಸ್ತುತ ಬಿಡುಗಡೆಯಾಗಿರುವುದು ಕ್ರೀಡಾಕೂಟದ ಅಧಿಕೃತ ಲಾಂಛನ (ಎಂಬ್ಲೆಮ್) ಮಾತ್ರವಾಗಿದ್ದು, ಅಧಿಕೃತ ಮ್ಯಾಸ್ಕಾಟ್ (ಶುಭಂಕರ್) ಇದಲ್ಲ ಎಂದು ಆಯೋಜಕರು ಸ್ಪಷ್ಟಪಡಿಸಿದ್ದಾರೆ. ಕ್ರೀಡಾಕೂಟ ಸಮೀಪಿಸುತ್ತಿದ್ದಂತೆ ಅಧಿಕೃತ ಮ್ಯಾಸ್ಕಾಟ್ ಅನ್ನು ಪ್ರತ್ಯೇಕವಾಗಿ ಘೋಷಿಸಲಾಗುವುದು. ಪ್ರಸಿದ್ಧ ಐಬಿಸ್ ಹಕ್ಕಿಯನ್ನು ಮ್ಯಾಸ್ಕಾಟ್ ಮಾಡಲಾಗುತ್ತದೆಯೇ ಎಂಬ ಪ್ರಶ್ನೆಗೆ ಒಲಿಂಪಿಕ್ಸ್ ಸಚಿವ ಟಿಮ್ ಮ್ಯಾಂಡರ್ ನಕಾರ ವ್ಯಕ್ತಪಡಿಸಿದ್ದಾರೆ. ಆದರೆ, ಒಂದಕ್ಕಿಂತ ಹೆಚ್ಚು ಮ್ಯಾಸ್ಕಾಟ್‌ಗಳನ್ನು ಹೊಂದುವ ಸಾಧ್ಯತೆಯನ್ನು ಮೇಯರ್ ಪ್ರಸ್ತಾಪಿಸಿದ್ದು, ಆಸ್ಟ್ರೇಲಿಯಾದ ಜನಪ್ರಿಯ ಕಾರ್ಟೂನ್ ಪಾತ್ರ 'ಬ್ಲೂಯಿ'ಯನ್ನು ಮ್ಯಾಸ್ಕಾಟ್ ಮಾಡುವ ಕುರಿತೂ ಸಾರ್ವಜನಿಕ ವಲಯದಲ್ಲಿ ಸಲಹೆಗಳು ಕೇಳಿಬರುತ್ತಿವೆ.
