ನೇಪಾಳದ ಗೋರ್ಖಾ ಜಿಲ್ಲೆಯ ಬೂಢಿ ಗಂಡಕಿ ನದಿ ಪಾತ್ರದಲ್ಲಿ ಉಂಟಾದ ಭೀಕರ ಪ್ರವಾಹದಿಂದಾಗಿ ಕನಿಷ್ಠ 10 ಜನರು ನಾಪತ್ತೆಯಾಗಿದ್ದಾರೆ ಹಾಗೂ ಆರು ಸೇತುವೆಗಳು ನೀರಿನ ರಭಸಕ್ಕೆ ಕೊಚ್ಚಿಹೋಗಿವೆ ಎಂದು ಅಧಿಕಾರಿಗಳು ಭಾನುವಾರ ದೃಢಪಡಿಸಿದ್ದಾರೆ.
ಕೊಚ್ಚಿಹೋದ ಸೇತುವೆಗಳಲ್ಲಿ ಎರಡು ಮೋಟಾರು ವಾಹನ ಸಂಚಾರದ ಸೇತುವೆಗಳು ಹಾಗೂ ನಾಲ್ಕು ತೂಗುಸೇತುವೆಗಳು ಸೇರಿವೆ. ಅರುಘಾಟ್, ತ್ರಿಪುರಸುಂದರಿ ಮತ್ತು ಸೋಟಿ-ಮಾನ್ಬು ಸಂಪರ್ಕಿಸುವ ಸೇತುವೆಗಳು ಹಾಗೂ ಧಾರಚೆ ಗ್ರಾಮೀಣ ಪುರಸಭೆಯ ಬೇಲಿ ಸೇತುವೆ (Bailey bridge) ಸೇರಿದಂತೆ ಮಚಿಕೊಲಾ, ಜಗತ್ ಮತ್ತು ಫಿಲಿಮ್ ಪ್ರದೇಶದ ಕಾಲುಸೇತುವೆಗಳು ಪ್ರವಾಹಕ್ಕೆ ಆಹುತಿಯಾಗಿವೆ. ಗೋರ್ಖಾದ ಸಹಾಯಕ ಜಿಲ್ಲಾಧಿಕಾರಿ ನೇತ್ರ ಪ್ರಸಾದ್ ಶರ್ಮಾ ಅವರು ಮಾಹಿತಿ ನೀಡಿದ್ದು, ಚುಮ್ನುಬ್ರಿ ಗ್ರಾಮೀಣ ಪುರಸಭೆಯ ಪೈನ್ಯು ಮತ್ತು ಬಗರ್ ಪ್ರದೇಶಗಳಲ್ಲಿ ಸುಮಾರು 35 ಮನೆಗಳು ಪ್ರವಾಹಕ್ಕೆ ಸಿಲುಕಿ ಧ್ವಂಸಗೊಂಡಿವೆ. ನದಿಯ ನೀರಿನ ಮಟ್ಟದಲ್ಲಿ ಏರಿಳಿತ ಮುಂದುವರಿದಿದ್ದು, ಅಧಿಕಾರಿಗಳು ಪರಿಸ್ಥಿತಿಯ ಮೇಲೆ ತೀವ್ರ ನಿಗಾ ವಹಿಸಿದ್ದಾರೆ.
ಘಟನೆಯ ಬೆನ್ನಲ್ಲೇ ನೇಪಾಳ ಪ್ರಧಾನಿ ಬಾಲೆನ್ ಶಾ ಅವರು ಪ್ರತಿಕ್ರಿಯಿಸಿ, ಸಂತ್ರಸ್ತರ ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಗೆ ನೇಪಾಳ ಸೇನೆಯ ಹೆಲಿಕಾಪ್ಟರ್ ಹಾಗೂ ಭೂಸೇನಾ ತುಕಡಿಗಳನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ. ಕಠ್ಮಂಡುವಿನಿಂದ ಜಂಟಿ ಶೀಘ್ರ ಕಾರ್ಯಾಚರಣೆ ಪಡೆಯನ್ನು (Rapid Response Team) ವಿಮಾನದ ಮೂಲಕ ಘಟನಾ ಸ್ಥಳಕ್ಕೆ ಕಳುಹಿಸಲಾಗಿದ್ದು, ಈಗಾಗಲೇ ಆರು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಗೃಹ ಸಚಿವ ಸುದಾನ್ ಗುರುಂಗ್ ಅವರು ಸಾರ್ವಜನಿಕರಿಗೆ ಜಾಗರೂಕರಾಗಿರಲು ಎಚ್ಚರಿಕೆ ನೀಡಿದ್ದು, ನದಿ ತೀರದ ನಿವಾಸಿಗಳು ತಕ್ಷಣವೇ ಎತ್ತರದ ಹಾಗೂ ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ಮನವಿ ಮಾಡಿದ್ದಾರೆ.