ಕೆನಡಾದ ಆಲ್ಬರ್ಟಾದಲ್ಲಿರುವ 'ಸಿಎಫ್ಬಿ ವೇನ್ರೈಟ್' ಮಿಲಿಟರಿ ನೆಲೆಯಲ್ಲಿ ತರಬೇತಿ ಸಮರಾಭ್ಯಾಸದ ವೇಳೆ ಭೀಕರ ಹುಲ್ಲುಗಾವಲು ಅಗ್ನಿ ಅವಘಡ ಸಂಭವಿಸಿದ್ದು, ಕೆನಡಾ ಸಶಸ್ತ್ರ ಪಡೆಯ ನಾಲ್ವರು ಯೋಧರು ಮೃತಪಟ್ಟಿದ್ದಾರೆ ಮತ್ತು 39 ಯೋಧರು ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ 19 ಯೋಧರ ಪರಿಸ್ಥಿತಿ ಅತ್ಯಂತ ಚಿಂತಾಜನಕವಾಗಿದೆ ಎಂದು ಕೆನಡಿಯನ್ ಬ್ರಾಡ್ಕಾಸ್ಟಿಂಗ್ ಕಾರ್ಪೊರೇಷನ್ (CBC) ವರದಿ ಮಾಡಿದೆ. ಮೃತಪಟ್ಟ ಯೋಧರನ್ನು ಎಡ್ಮಂಟನ್ನ ಪ್ರಿನ್ಸೆಸ್ ಪ್ಯಾಟ್ರಿಷಿಯಾಸ್ ಕೆನಡಿಯನ್ ಲೈಟ್ ಇನ್ಫೆಂಟ್ರಿಯ 3 ನೇ ಬೆಟಾಲಿಯನ್ನಲ್ಲಿ ಸೇವೆ ಸಲ್ಲಿಸುತ್ತಿದ್ದ ಸರ್ಜೆಂಟ್ ಮಾರ್ಗನ್ ವೊಂಗ್, ಪ್ರೈವೇಟ್ ಶಾನ್ ಫ್ಯಾರೆಲ್, ಪ್ರೈವೇಟ್ ಐಡಾನ್ ಗೌಲ್ಡಿಂಗ್ ಮತ್ತು ಪ್ರೈವೇಟ್ ಹೇಡನ್ ಲೈಕ್ಮಾರ್ಕ್ ಎಂದು ಗುರುತಿಸಲಾಗಿದೆ.
ಈ ದುರಂತದ ಕುರಿತು ಒಟ್ಟಾವಾದಲ್ಲಿ ಮಾತನಾಡಿದ ಕೆನಡಾದ ಪ್ರಧಾನಿ ಮಾರ್ಕ್ ಕಾರ್ನಿ, ಇದು ಶಾಂತಿಕಾಲದಲ್ಲಿ ಕೆನಡಾದ ನೆಲದಲ್ಲಿ ಸಶಸ್ತ್ರ ಪಡೆಗಳಿಗೆ ಎದುರಾದ ಅತ್ಯಂತ ಭೀಕರ ದುರಂತಗಳಲ್ಲಿ ಒಂದಾಗಿದೆ ಎಂದು ಕಂಬನಿ ಮಿಡಿದಿದ್ದಾರೆ. ವೀರ ಯೋಧರ ಅಗಲಿಕೆಗೆ ಇಡೀ ದೇಶವೇ ಶೋಕದಲ್ಲಿದ್ದು, ಗೌರವಾರ್ಥವಾಗಿ ದೇಶಾದ್ಯಂತ ಎಲ್ಲಾ ಫೆಡರಲ್ ಸರ್ಕಾರಿ ಕಟ್ಟಡಗಳಲ್ಲಿ ರಾಷ್ಟ್ರಧ್ವಜವನ್ನು ಅರ್ಧಮಟ್ಟಕ್ಕೆ ಹಾರಿಸಲು ಆದೇಶಿಸಲಾಗಿದೆ. ಕೆನಡಾ ಸರ್ಕಾರವು ಆಲ್ಬರ್ಟಾ ಪ್ರಾಂತೀಯ ಸರ್ಕಾರ ಮತ್ತು ಸ್ಥಳೀಯ ಅಧಿಕಾರಿಗಳೊಂದಿಗೆ ನಿಕಟ ಸಂಪರ್ಕದಲ್ಲಿದ್ದು, ಸಂತ್ರಸ್ತ ಕುಟುಂಬಗಳಿಗೆ ಅಗತ್ಯ ನೆರವು ನೀಡಲಾಗುತ್ತಿದೆ.
ಲೈವ್ ಮದ್ದುಗುಂಡುಗಳನ್ನು ಬಳಸಿ ನಡೆಸಲಾಗುತ್ತಿದ್ದ ಭಾರಿ ತರಬೇತಿ ಸಮರಾಭ್ಯಾಸದ ವೇಳೆ ಈ ಅಗ್ನಿ ಅವಘಡ ಸಂಭವಿಸಿದೆ ಎಂದು ಕೆನಡಾ ಪಡೆಗಳ 1 ನೇ ಕೆನಡಿಯನ್ ಡಿವಿಷನ್ ಕಮಾಂಡರ್ ಮೇಜರ್ ಜನರಲ್ ವೇಡ್ ರಟ್ಲ್ಯಾಂಡ್ ತಿಳಿಸಿದ್ದಾರೆ. ಪ್ರತಿ ಗಂಟೆಗೆ 69 ಕಿಲೋಮೀಟರ್ಗೂ ಹೆಚ್ಚಿನ ವೇಗದಲ್ಲಿ ಬೀಸಿದ ಪ್ರಚಂಡ ಗಾಳಿಯಿಂದಾಗಿ ಕೇವಲ ಒಂದು ನಿಮಿಷಕ್ಕಿಂತ ಕಡಿಮೆ ಅವಧಿಯಲ್ಲಿ ಬೆಂಕಿಯು ಒಂದು ಕಿಲೋಮೀಟರ್ ವ್ಯಾಪ್ತಿಗೆ ಹರಡಿತು. ಬೆಂಕಿ ಹೊತ್ತಿಕೊಂಡ ತಕ್ಷಣವೇ ಪಡೆಗಳಿಗೆ ರಕ್ಷಿಸಿಕೊಳ್ಳಲು ಕಾಲಾವಕಾಶವೇ ಸಿಗಲಿಲ್ಲ ಎಂದು ಅವರು ವಿವರಿಸಿದ್ದಾರೆ. ಈ ಘಟನೆಯ ಕುರಿತು ಸಂಪೂರ್ಣ ತನಿಖೆಗೆ ಆದೇಶಿಸಲಾಗಿದ್ದು, ವರದಿ ಬರಲು ಕನಿಷ್ಠ ಒಂದು ತಿಂಗಳು ಬೇಕಾಗಬಹುದು ಎಂದು ಸೇನಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.