ಕೆನಡಾದ ಆಲ್ಬರ್ಟಾದಲ್ಲಿರುವ ಕೆನಡಿಯನ್ ಫೋರ್ಸಸ್ ಬೇಸ್ ವೇನ್ರೈಟ್ (CFB Wainwright) ಮಿಲಿಟರಿ ನೆಲೆRಯಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಅನೇಕ ಸೈನಿಕರು ಸಾವನ್ನಪ್ಪಿದ್ದಾರೆ ಮತ್ತು ಗಾಯಗೊಂಡಿದ್ದಾರೆ ಎಂದು ಕೆಬಿಸಿ (CBC) ವರದಿ ಮಾಡಿದೆ. ಘಟನೆಗೆ ತೀವ್ರ ಸಂತಾಪ ವ್ಯಕ್ತಪಡಿಸಿರುವ ಕೆನಡಾದ ಪ್ರಧಾನಿ ಮಾರ್ಕ್ ಕಾರ್ನಿ, ಸಂತ್ರಸ್ತ ಕುಟುಂಬಗಳೊಂದಿಗೆ ಸರ್ಕಾರದ ಬೆಂಬಲವಿದೆ ಎಂದು ತಿಳಿಸಿದ್ದು, ಆಲ್ಬರ್ಟಾ ಪ್ರೀಮಿಯರ್ ಡೇನಿಯಲ್ ಸ್ಮಿತ್ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಪರಿಸ್ಥಿತಿಯನ್ನು ಅವಲೋಕಿಸುತ್ತಿರುವುದಾಗಿ ಎಕ್ಸ್ (X) ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.
ರಾಷ್ಟ್ರೀಯ ರಕ್ಷಣಾ ಸಚಿವ ಡೇವಿಡ್ ಮೆಕ್ಗಿಂಟಿ ಕೂಡ ಈ ದುರಂತದಲ್ಲಿ ಸಾವು-ನೋವುಗಳು ಸಂಭವಿಸಿರುವುದನ್ನು ಖಚಿತಪಡಿಸಿದ್ದು, ಕೇಂದ್ರ ಮತ್ತು ಪ್ರಾಂತೀಯ ಸರ್ಕಾರಗಳು ಜಂಟಿಯಾಗಿ ಅಗತ್ಯ ತುರ್ತು ಸೇವೆಗಳನ್ನು ಹಾಗೂ ರಕ್ಷಣಾ ಕಾರ್ಯಾಚರಣೆಯನ್ನು ಚುರುಕುಗೊಳಿಸಿವೆ. ರಾಯಲ್ ಕೆನಡಿಯನ್ ಮೌಂಟೆಡ್ ಪೊಲೀಸ್ (RCMP) ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ತನಿಖೆ ಆರಂಭಿಸಿದ್ದು, ಬೆಂಕಿ ಕಾಣಿಸಿಕೊಳ್ಳಲು ನಿಖರವಾದ ಕಾರಣವೇನು ಎಂಬುದರ ಕುರಿತು ಕೆನಡಿಯನ್ ಆರ್ಮ್ಡ್ ಫೋರ್ಸಸ್ ಹೆಚ್ಚಿನ ವಿವರಗಳನ್ನು ನೀಡಲಿದೆ ಎಂದು ತಿಳಿಸಲಾಗಿದೆ. 1950 ರ ದಶಕದಿಂದಲೂ ಪ್ರಮುಖ ತರಬೇತಿ ಕೇಂದ್ರವಾಗಿರುವ ಈ ನೆಲೆಯಲ್ಲಿ ಸುಮಾರು 690 ಮಿಲಿಟರಿ ಸಿಬ್ಬಂದಿ ಹಾಗೂ 300 ನಾಗರಿಕ ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದಾರೆ.