ನವದೆಹಲಿ: ತಮಿಳುನಾಡಿಗೆ ಕಾವೇರಿ ನೀರು ಹಂಚಿಕೆ ಮಾಡlಬೇಕಾದ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ನಲ್ಲಿ ಸೋಮವಾರ ಕರ್ನಾಟಕ ಹಾಗೂ ತಮಿಳುನಾಡು ಸರ್ಕಾರಗಳ ಅರ್ಜಿಗಳ ವಿಚಾರಣೆ ನಡೆಯಿತು. ನ್ಯಾಯಾಲಯದಲ್ಲಿ ಉಭಯ ರಾಜ್ಯಗಳ ವಕೀಲರು ತಮ್ಮ ವಾದ-ಪ್ರತಿವಾದಗಳನ್ನು ಮಂಡಿಸಿದರು. ಎಲ್ ನಿನೋ ಪರಿಣಾಮದಿಂದ ಉಂಟಾಗಿರುವ ಮಳೆಯ ಅಭಾವ ಮತ್ತು ಕುಡಿಯುವ ನೀರಿನ ಸಂಕಷ್ಟದ ಕುರಿತು ನ್ಯಾಯಪೀಠದ ಗಮನಕ್ಕೆ ತರಲಾಯಿತು.
ವಿಚಾರಣೆ ವೇಳೆ ತಮಿಳುನಾಡು ಪರ ಹಿರಿಯ ವಕೀಲ ಮುಕುಲ್ ರೋಹ್ಟಗಿ ವಾದ ಮಂಡಿಸಿ, ಪ್ರಸಕ್ತ ವರ್ಷ ಮಳೆಯಿಲ್ಲದೆ ಬೆಳೆಗಳು ಒಣಗುತ್ತಿದ್ದು, ಜುಲೈನಿಂದ ಇಲ್ಲಿವರೆಗೆ ಒಟ್ಟು 11 ಟಿಎಂಸಿ ನೀರನ್ನು ಕಡಿಮೆ ಹರಿಸಲಾಗಿದೆ ಎಂದು ಆರೋಪಿಸಿದರು. ಕಾವೇರಿ ನೀರು ನಿಯಂತ್ರಣ ಸಮಿತಿ (CWMA) ಸೂಚಿಸಿದಂತೆ 3,000 ಕ್ಯೂಸೆಕ್ ನೀರು ಹರಿಸುವುದು ಮಾತ್ರವಲ್ಲದೆ, ಬಾಕಿ ಉಳಿದಿರುವ 11 ಟಿಎಂಸಿ ನೀರನ್ನೂ ಕೂಡ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಕರ್ನಾಟಕದ ಪರ ಹಿರಿಯ ವಕೀಲ ಶ್ಯಾಮ್ ದಿವಾನ್ ವಾದ ಮಂಡಿಸಿ, ಈ ವರ್ಷ ರಾಜ್ಯದಲ್ಲಿ ತೀವ್ರ ಬರಗಾಲವಿದ್ದು, ಅಣೆಕಟ್ಟುಗಳಲ್ಲಿ ಲಭ್ಯವಿರುವ ನೀರನ್ನು ಕೇವಲ ಕುಡಿಯುವ ಉದ್ದೇಶಕ್ಕಾಗಿ ಮಾತ್ರ ಕಾಯ್ದಿರಿಸಲಾಗಿದೆ ಎಂದು ಸ್ಪಷ್ಟಪಡಿಸಿದರು. ಒಟ್ಟು ಲಭ್ಯವಿರುವ 57 ಟಿಎಂಸಿ ನೀರಿನಲ್ಲಿ ಬೆಂಗಳೂರು ಮತ್ತು ಮೈಸೂರು ನಗರಗಳ ಕುಡಿಯುವ ಅವಶ್ಯಕತೆಗೇ 45 ಟಿಎಂಸಿ ನೀರು ಬೇಕಾಗಿದೆ. ಬೆಳೆ ಬೆಳೆಯದಂತೆ ರೈತರಿಗೆ ಈಗಾಗಲೇ ಮನವಿ ಮಾಡಿಕೊಳ್ಳಲಾಗಿದ್ದು, ಸಿಡಬ್ಲ್ಯೂಎಂಎ (CWMA) ಸೂಚನೆಯಂತೆ ಪ್ರತಿದಿನ 3,000 ಕ್ಯೂಸೆಕ್ ನೀರನ್ನು ನಿಯಮಿತವಾಗಿ ಬಿಡಲಾಗುತ್ತಿದೆ ಎಂದು ನ್ಯಾಯಾಲಯಕ್ಕೆ ವಿವರಿಸಿದರು.
ಉಭಯ ರಾಜ್ಯಗಳ ವಾದಗಳನ್ನು ಆಲಿಸಿದ ಸುಪ್ರೀಂ ಕೋರ್ಟ್, ಜಲಾಶಯಗಳಲ್ಲಿ ಹೆಚ್ಚುವರಿ ನೀರು ಲಭ್ಯವಿಲ್ಲದಿದ್ದಾಗ ಬಾಕಿ ನೀರನ್ನು ಹೇಗೆ ಬಿಡುಗಡೆ ಮಾಡಲು ಸಾಧ್ಯ ಎಂದು ತಮಿಳುನಾಡಿನ ಅರ್ಜಿಯನ್ನು ಪ್ರಶ್ನಿಸಿತು. ಅಲ್ಲದೆ, ಪ್ರತಿ ಬಾರಿಯೂ ತಮಿಳುನಾಡು ಕಾವೇರಿ ವಿಚಾರವಾಗಿ ಸಮಸ್ಯೆಗಳನ್ನು ಮುಂದಿಡುತ್ತಿದೆ ಎಂದು ಅಭಿಪ್ರಾಯಪಟ್ಟ ಸುಪ್ರೀಂ ಕೋರ್ಟ್ ಪೀಠವು, ಈ ಕುರಿತಾದ ಆದೇಶವನ್ನು ಕಾಯ್ದಿರಿಸಿತು ಹಾಗೂ ತಮಿಳುನಾಡು ರೈತರ ಪರ ವಕೀಲರ ಪ್ರತ್ಯೇಕ ವಾದ ಆಲಿಸಲು ನಿರಾಕರಿಸಿತು.