ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ–ಉದ್ಘಾಟನೆ, ಪ್ರವಾಸೋದ್ಯಮಕ್ಕೆ ಹೊಸ ಉತ್ತೇಜನ
ಬಾದಾಮಿ, ಜನವರಿ 19: ಬಾಗಲಕೋಟೆ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಬಾದಾಮಿಯಲ್ಲಿ ವಿಜೃಂಭಣೆಯಿಂದ ಆಯೋಜಿಸಲಾದ “ಚಾಲುಕ್ಯ ಉತ್ಸವ–2026” ಅನ್ನು ಸನ್ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರು ಇಂದು ಉದ್ಘಾಟಿಸಿ ಶುಭ ಹಾರೈಸಿದರು.
ಚಾಲುಕ್ಯರ ಶ್ರೀಮಂತ ಇತಿಹಾಸ, ಕಲೆ, ವಾಸ್ತುಶಿಲ್ಪ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಜನಸಾಮಾನ್ಯರಿಗೆ ಪರಿಚಯಿಸುವ ಉದ್ದೇಶದಿಂದ ಜನವರಿ 19, 20 ಮತ್ತು 21ರಂದು ಬಾದಾಮಿ, ಪಟ್ಟದಕಲ್ಲು ಹಾಗೂ ಐಹೊಳೆಯಲ್ಲಿ ಈ ಮಹೋತ್ಸವ ಆಯೋಜಿಸಲಾಗಿದೆ.
ಉದ್ಘಾಟನಾ ಸಮಾರಂಭದಲ್ಲಿ ಅಬಕಾರಿ ಸಚಿವರು ಹಾಗೂ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಶ್ರೀ ಆರ್.ಬಿ. ತಿಮ್ಮಾಪೂರ ಅವರು ಮಾತನಾಡಿ, ಚಾಲುಕ್ಯ ಉತ್ಸವವು ಜಿಲ್ಲೆಯ ಗೌರವವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ಐತಿಹಾಸಿಕ ಕ್ಷಣವಾಗಿದ್ದು, ಬಾದಾಮಿ ಗುಹೆಗಳು, ಪಟ್ಟದಕಲ್ಲು ಮತ್ತು ಐಹೊಳೆಯಂತಹ ವಾಸ್ತುಶಿಲ್ಪದ ಅದ್ಭುತಗಳನ್ನು ಜನಸಾಮಾನ್ಯರಿಗೆ ಹತ್ತಿರ ತರುವಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂದರು. ಜಿಲ್ಲಾಡಳಿತ, ಸರ್ಕಾರಿ ಇಲಾಖೆಗಳು ಹಾಗೂ ಸ್ಥಳೀಯ ಸಂಘಟನೆಗಳ ಸಮನ್ವಯದೊಂದಿಗೆ ಉತ್ಸವವನ್ನು ಯಶಸ್ವಿಗೊಳಿಸಲಾಗುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಚಿವರಾದ ಬೈರತಿ ಸುರೇಶ್, ಶಿವರಾಜ್ ತಂಗಡಗಿ, ಬಾದಾಮಿ ಶಾಸಕ ಭೀಮಸೇನ್ ಚಿಮ್ಮನಕಟ್ಟಿ, ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ್, ಜಿಲ್ಲೆಯ ಇತರ ಶಾಸಕರು, ವಿಧಾನ ಪರಿಷತ್ ಸದಸ್ಯರು, ಜಿಲ್ಲಾಡಳಿತದ ಅಧಿಕಾರಿಗಳು, ಸ್ಥಳೀಯ ಮುಖಂಡರು ಹಾಗೂ ಹಲವಾರು ಗಣ್ಯರು ಉಪಸ್ಥಿತರಿದ್ದರು.
ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ
ಚಾಲುಕ್ಯ ಉತ್ಸವದ ಅಂಗವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಾದಾಮಿಯ ಅಂಜುಮನ್-ಎ-ಇಸ್ಲಾಂ ಕಮಿಟಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅನುದಾನದಲ್ಲಿ ಕೈಗೊಂಡ ವಿವಿಧ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿದರು. ಇದೇ ವೇಳೆ ನವೀಕೃತ ‘ಹೋಟೆಲ್ ಬಾದಾಮಿ ಕೋರ್ಟ್’ನ ಉದ್ಘಾಟನೆ ಹಾಗೂ ಶ್ರೀಜಿತ್ ರೆಸಾರ್ಟ್‌ಗೆ ಶಂಕುಸ್ಥಾಪನೆ ನೆರವೇರಿಸಲಾಯಿತು.
ಈ ಸಂದರ್ಭ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ರಾಜ್ಯದ ಐತಿಹಾಸಿಕ ತಾಣಗಳಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸುವುದು ಸರ್ಕಾರದ ಆದ್ಯತೆಯಾಗಿದ್ದು, ಖಾಸಗಿ ವಲಯದ ಸಹಯೋಗದೊಂದಿಗೆ ಆಧುನಿಕ ಸೌಲಭ್ಯಗಳನ್ನು ಒದಗಿಸುವ ಮೂಲಕ ಸ್ಥಳೀಯರಿಗೆ ಉದ್ಯೋಗಾವಕಾಶಗಳನ್ನು ಹೆಚ್ಚಿಸಲಾಗುತ್ತಿದೆ ಎಂದು ಹೇಳಿದರು.
ಇಮ್ಮಡಿ ಪುಲಕೇಶಿ ಪುತ್ಥಳಿಗೆ ಶಿಲಾನ್ಯಾಸ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪೂರ ಅವರು ಬಾದಾಮಿಯ ಇಮ್ಮಡಿ ಪುಲಕೇಶಿ ವೃತ್ತದಲ್ಲಿ “ಇಮ್ಮಡಿ ಪುಲಕೇಶಿ ಪುತ್ಥಳಿ ನಿರ್ಮಾಣ” ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿದರು. ಚಾಲುಕ್ಯ ಸಾಮ್ರಾಜ್ಯದ ಶ್ರೇಷ್ಠ ರಾಜನಾದ ಇಮ್ಮಡಿ ಪುಲಕೇಶಿಯವರ ಭವ್ಯ ಪುತ್ಥಳಿ ನಿರ್ಮಾಣವು ಬಾದಾಮಿಯ ಐತಿಹಾಸಿಕ ಮಹತ್ವವನ್ನು ಇನ್ನಷ್ಟು ಉನ್ನತಿಗೇರಿಸಲಿದೆ ಎಂದು ತಿಳಿಸಿದರು. ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಲು ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಸಚಿವರಾದ ಬೈರತಿ ಸುರೇಶ್, ಆರ್.ಬಿ. ತಿಮ್ಮಾಪೂರ, ಶಿವರಾಜ್ ತಂಗಡಗಿ, ಶಾಸಕರುಗಳಾದ ಭೀಮಸೇನ್ ಚಿಮ್ಮನಕಟ್ಟಿ, ವಿಜಯಾನಂದ ಕಾಶಪ್ಪನವರ್, ವಿಧಾನ ಪರಿಷತ್ ಸದಸ್ಯರು, ಜಿಲ್ಲಾಡಳಿತದ ಅಧಿಕಾರಿಗಳು, ಸ್ಥಳೀಯ ಮುಖಂಡರು ಹಾಗೂ ಅನೇಕ ಗಣ್ಯರು ಭಾಗವಹಿಸಿದ್ದರು.