ಕೆಂಭಾವಿ, ಫೆ.15 – ಶಿಕ್ಷಕರು ತರಗತಿಯಲ್ಲಿ ಕೇವಲ ಪಾಠ ಬೋಧನೆ ಮಾಡುವುದಷ್ಟೇ ಅಲ್ಲದೆ, ಅದು ಮಕ್ಕಳಿಗೆ ಎಷ್ಟು ಅರ್ಥವಾಗಿದೆ ಎಂಬುದನ್ನು ತಿಳಿದುಕೊಂಡಾಗಲೇ ಶಿಕ್ಷಣಕ್ಕೆ ನಿಜವಾದ ಮಹತ್ವ ದೊರೆಯುತ್ತದೆ ಎಂದು ನಿವೃತ್ತ ಡಿ.ಡಿ.ಪಿ.ಐ ಶಾಂತಗೌಡ ಪಾಟೀಲ ಹೇಳಿದರು.
ಪಟ್ಟಣದ ಹಿಲ್‌ಟಾಪ್ ಕಾಲೋನಿಯ ಶ್ರೀಸಾಯಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಸಂಜೆ ನಡೆದ ಶಾಲೆಯ 13ನೇ ವರ್ಷದ ವಾರ್ಷಿಕೋತ್ಸವ ಹಾಗೂ 8ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಉತ್ತಮ ಶಿಕ್ಷಣದ ಜೊತೆಗೆ ಸಮಾಜಕ್ಕೆ ಮಾದರಿಯಾಗುವ ಚಟುವಟಿಕೆಗಳನ್ನು ವಿದ್ಯಾರ್ಥಿಗಳಿಗೆ ಕಲಿಸುವುದು ಶಿಕ್ಷಕರ ಕರ್ತವ್ಯ ಎಂದು ಹೇಳಿದರು. ಶಿಕ್ಷಕರು ದೇಶವನ್ನು ರೂಪಿಸುವ ಮಹತ್ತರ ಶಕ್ತಿಯಾಗಿದ್ದು, ವಿದ್ಯಾರ್ಥಿಗಳನ್ನು ಭವಿಷ್ಯದ ಉತ್ತಮ ಪ್ರಜೆಗಳನ್ನಾಗಿ ರೂಪಿಸಿ ಸಂಸ್ಕೃತಿ, ಸಂಸ್ಕಾರ ಹಾಗೂ ಧರ್ಮವನ್ನು ಉಳಿಸುವ ಜವಾಬ್ದಾರಿ ಅವರ ಮೇಲಿದೆ ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಸಾಹಿತಿ ಹಾಗೂ ಕನ್ನಡ ಕವಿರತ್ನ ಪ್ರಶಸ್ತಿ ಪುರಸ್ಕೃತ ಗುಂಡಪ್ಪ ಕುಂಬಾರ ಯಾಳವಾರ ಅವರು ವಿಶೇಷ ಉಪನ್ಯಾಸ ನೀಡಿ, ಶಿಕ್ಷಣ ಕ್ಷೇತ್ರದಲ್ಲಿ ಶಿಕ್ಷಕರ ಜವಾಬ್ದಾರಿ ಹಾಗೂ ತಂದೆ–ತಾಯಿಗಳ ಪಾತ್ರದ ಕುರಿತು ವಿವರಿಸಿದರು. ಶಾಲೆಯ ಮುಖ್ಯಗುರು ಜ್ಯೋತಿ ಎಸ್. ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು.
ಇದೇ ವೇಳೆ 8ನೇ ತರಗತಿಯ ವಿದ್ಯಾರ್ಥಿಗಳನ್ನು ಶಾಲೆಯ ವತಿಯಿಂದ ಸತ್ಕರಿಸಿ ಗೌರವಿಸಲಾಯಿತು. ಮಕ್ಕಳಿಂದ ಮನೋರಂಜನಾ ಕಾರ್ಯಕ್ರಮಗಳು ಜರುಗಿ ಸಂಭ್ರಮ ಹೆಚ್ಚಿಸಿತು.
ಹಿರೇಮಠದ ಶ್ರೀ ಚನ್ನಬಸವ ಶಿವಾಚಾರ್ಯರು ಸಾನಿಧ್ಯ ವಹಿಸಿದ್ದರು. ಪುರಸಭೆ ಅಧ್ಯಕ್ಷೆ ಪ್ರಿಯಾ ರಾಮನಗೌಡ ಕಾರ್ಯಕ್ರಮ ಉದ್ಘಾಟಿಸಿದರು. ಅಧ್ಯಕ್ಷ ನೀಲಕಂಠಾರಾಯಗೌಡ ಪಾಟೀಲ, ಸಿಆರ್‌ಸಿ ಬಂದೇನವಾಜ ನಾಲತವಾಡ, ಶಿವಶಂಕರ ದೇವೂರ, ವೆಂಕಟೇಶ ರಾಠೋಡ, ಆದಿತ್ಯಗೌಡ ಪೊಲೀಸ್ ಪಾಟೀಲ, ಶ್ರೀನಿವಾಸರೆಡ್ಡಿ ಪಾಟೀಲ ಯಾಳಗಿ, ಮಲ್ಲಿನಾಥ ಗುರುಮಠ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಡಾ. ಯಂಕನಗೌಡ ಪಾಟೀಲ ಕಾರ್ಯಕ್ರಮ ನಿರೂಪಿಸಿದರು.