ಕಾಂಗ್ರೆಸ್ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಆಯ್ಕೆ ಅಸಿಂಧು
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಕ್ಷೇತ್ರದಿಂದ ಆಯ್ಕೆದ್ದ ಕಾಂಗ್ರೆಸ್ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಆಯ್ಕೆಯನ್ನು ಹೈಕೋರ್ಟ್ ಅಸಿಂಧುಗೊಳಿಸಿ ಆದೇಶಿದೆ.
ಸುಬ್ಬಾರೆಡ್ಡಿ ಆಯ್ಕೆಯನ್ನು ಅಸಿಂಧು ಎಂದು ಘೋಷಣೆ ಮಾಡಬೇಕು ಎಂದು ಬಿಜೆಪಿಯ ಪರಾಜಿತ ಅಭ್ಯರ್ಥಿ ಸಿ. ಮುನಿರಾಜು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂಜಿಎಸ್ ಕಮಲ್ ಅವರಿದ್ದ ನ್ಯಾಯಪೀಠ ಈ ಆದೇಶ ಹೊರಡಿಸಿದೆ.
ಇದೇ ಸಂದರ್ಭದಲ್ಲಿ ಹೈಕೋರ್ಟ್ ಬಿಜೆಪಿ ಮುಖಂಡ ಮುನಿರಾಜು ಅವರನ್ನು ಜಯಶಾಲಿಯನ್ನಾಗಿ ಘೋಷಣೆ ಮಾಡಲು ನಿರಾಕರಿಸಿದ್ದು, ಪ್ರಕರಣವನ್ನು ಮತ್ತೆ ಚುನಾವಣಾ ಆಯೋಗ ಮತ್ತು ವಿಧಾನಸಭೆ ಕಾರ್ಯದರ್ಶಿಗೆ ರವಾನಿಸಿ ಆದೇಶಿಸಿದೆ.
ಆದೇಶ ಪ್ರಕಟವಾಗುತ್ತಿದ್ದಂತೆ ಸುಬ್ಬಾರೆಡ್ಡಿ ಪರ ವಕೀಲರು, ಅರ್ಜಿಯ ಸಂಬಂಧ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಕೆ ಮಾಡುವವರೆಗೂ ತಡೆಯಾಜ್ಞೆ ನೀಡಲು ಮನವಿ ಮಾಡಿದರು. ಇದಕ್ಕೆ ಅರ್ಜಿದಾರರ ಪರ ವಕೀಲರು ಆಕ್ಷೇಪಿಸಿದರು. ಹೀಗಾಗಿ ನ್ಯಾಯಪೀಠ ಮನವಿ ತಿರಸ್ಕಿರಿಸಿತು. ಇದೀಗ ಸುಬ್ಬಾರೆಡ್ಡಿ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಬೇಕಾಗಿದೆ.
ಏನಿದು ಪ್ರಕರಣ:
ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಸುಬ್ಬಾರೆಡ್ಡಿ ವಿರುದ್ಧ ಬಿಜೆಪಿ ಮುಖಂಡ ಸಿ.ಮುನಿರಾಜು ಪರಾಜಿತಗೊಂಡಿದ್ದರು.
ಬಾಗೇಪಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದ ಸುಬ್ಬಾರೆಡ್ಡಿ ಅವರು ಚುನಾವಣೆಗೆ ಸಲ್ಲಿಸಿದ್ದ ಪ್ರಮಾಣ ಪತ್ರದಲ್ಲಿ ಆಸ್ತಿಗಳನ್ನು ಘೋಷಣೆ ಮಾಡದೇ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಸಿ. ಮುನಿರಾಜು ಆರೋಪಿಸಿದ್ದರು.
ಜೊತೆಗೆ ಇದು ಸಹ ಚುನಾವಣಾ ಅಕ್ರಮದ ಅಡಿಯಲ್ಲಿ ಬರಲಿದೆ. ಆದ್ದರಿಂದ ಸುಬ್ಬಾರೆಡ್ಡಿ ಆಯ್ಕೆ ರದ್ದುಮಾಡಬೇಕು, ಎರಡನೇ ಅತಿ ಹೆಚ್ಚು ಮತ ಗಳಿಸಿದ ತಮ್ಮನ್ನು ಜಯಶೀಲರನ್ನಾಗಿ ಘೋಷಣೆ ಮಾಡಬೇಕು ಎಂದು ಹೈಕೋರ್ಟ್ಗೆ ಮುನಿರಾಜು ಅರ್ಜಿ ಸಲ್ಲಿಸಿ ಮನವಿ ಮಾಡಿದ್ದರು.
ಮುನಿರಾಜು ವಿರುದ್ಧ ದೂರು:
ಬಾಗೇಪಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅವರು ಸಿ.ಮುನಿರಾಜು ವಿರುದ್ಧ ಸುಳ್ಳು ಆರೋಪ ಸತ್ಯ ಮಾಡುವ ದುರುದ್ದೇಶದಿಂದ ನಕಲಿ ದಾಖಲೆ ಸೃಷ್ಟಿಸಿದ್ದಾರೆ ಎಂದು ಆರೋಪಿಸಿ ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ಕಳೆದ ವರ್ಷ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದರು.
ವಿದೇಶದಲ್ಲಿ ಅಕ್ರಮವಾಗಿ ಆಸ್ತಿ ಸಂಪಾದನೆ, ಹಣ ವರ್ಗಾವಣೆ ಸಂಬಂಧಿಸಿದಂತೆ ಸುಳ್ಳು ದಾಖಲೆಗಳನ್ನು ಸೃಷ್ಠಿಸಲಾಗಿದೆ. ನನ್ನ ಸ್ನೇಹಿತನಿಗೆ ಸಿ.ಮುನಿರಾಜು ಅವರ ವಾಟ್ಸ್ಆ್ಯಪ್ ನಂಬರ್ನಿಂದ ದಾಖಲೆಗಳು ಬಂದಿದ್ದು, ಕಾನೂನು ಕ್ರಮ ತೆಗೆದುಕೊಳ್ಳಬೇಕು. ಈ ಮೂಲಕ ಕ್ಷೇತ್ರದಲ್ಲಿ ನನ್ನ ಜನಪ್ರಿಯತೆ ಕುಗ್ಗಿಸುವ ಮತ್ತು ಕಳಂಕ ತರುವ ಒಳಸಂಚು ನಡೆಸಿರುವುದಾಗಿ ದೂರಿನಲ್ಲಿ ಸುಬ್ಬಾರೆಡ್ಡಿ ಆರೋಪಿಸಿ ಪೊಲೀಸ್ ಠಾಣೆಗೆ ದೂರಿದ್ದರು.
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.